

ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಬಿಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರ ವಿತರಿಸುವ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದ್ದು, ದೊಡ್ಡ ಜಾಲವೊಂದು ಇದನ್ನು ದಂಧೆ ಮಾಡಿಕೊಂಡಿದೆ.
ಹಸಿವು, ಅನ್ನದ ಮೌಲ್ಯ ಅರಿತಿದ್ದೇನೆ. ಹಸಿವು ಮುಕ್ತ ರಾಜ್ಯವನ್ನಾಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದಾಗಿ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಪುನರುಚ್ಚರಿಸಿದ್ದಾರೆ. ಆದರೆ, ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಬೀಳುತ್ತಿಲ್ಲ.
ಲಾರಿಗಳಿಗೆ ಲೋಡ್ ಮಾಡುವ ಅನ್ನಭಾಗ್ಯದ ಟನ್‌ಗಟ್ಟಲೆ ಅಕ್ಕಿಯನ್ನು ಜಿಲ್ಲೆ ಸೇರಿ ರಾಜ್ಯದ ಸಾವಿರಾರು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಹಂತದಲ್ಲೇ ಬಹುತೇಕ ಕಡೆಗಳಲ್ಲಿ ಆಟೋ, ಟಾಟಾ ಏಸ್, ಆಪೆ ವಾಹನಗಳ ಮೂಲಕ ಚೀಲಗಳ ಸಮೇತ ಗಲ್ಲಿ ಗಲ್ಲಿಗಳಲ್ಲಿ ಸಾರ್ವಜನಿಕರ ಕಣ್ಣೆದುರೆ, ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿದೆ.
ಇದನ್ನೇ ಕೆಲವರು ಇದನ್ನು ದಂಧೆ ಮಾಡಿಕೊಂಡಿದ್ದಾರೆ. ಕೆಲ ಮಂಡಕ್ಕಿ ಬಟ್ಟಿ, ಹೋಟೆಲ್ ಸೇರಿ ಇನ್ನಿತರ ಕಡೆಗಳಿಗೆ ರವಾನೆ ಮಾಡಲಾಗುತ್ತಿದೆ. ಇದನ್ನು ಆಹಾರ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಆರೋಪ ಕೇಳಿಬಂದಿದೆ.
*ಗ್ಯಾರಂಟಿ ಪದಾಧಿಕಾರಿಗಳಿಂದಲೇ ಆರೋಪ:
ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ಪಡಿತರ ಚೀಟಿಗಳಿವೆ. ಇದರಲ್ಲಿ 1.14 ಕೋಟಿಯಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯಲ್ಲಿ 3.94 ಲಕ್ಷ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಅರ್ಹರಿಗೆ ವಿತರಿಸುವ ವೇಳೆ ತೂಕದಲ್ಲೂ ಮೋಸವಾಗುತ್ತಿದೆ. ಕಳ್ಳ ಸಾಗಾಣೆ ಪ್ರಕರಣ ಹೆಚ್ಚುತ್ತಿವೆ ಎಂಬ ಆರೋಪ ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳಿಂದಲೇ ಕೇಳಿ ಬಂದಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂಬ ಅಸಮಾಧಾನ ವ್ಯಕ್ತವಾಗಿದೆ.
*ಕೋಟ್*
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಆಗುತ್ತಿರುವ ಕುರಿತು ನಮ್ಮ ಪದಾಧಿಕಾರಿಗಳೇ ತಿಳಿಸಿದ್ದಾರೆ. ಈಗಾಗಲೇ ಕ್ರಮಕ್ಕೆ ಆಗ್ರಹಿಸಿ ಆಹಾರ ಸಚಿವರ ಗಮನಕ್ಕೆ ತರಲಾಗಿದೆ. ಅ.27ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರದ ಮೂಲಕ ಒತ್ತಾಯಿಸಲಿದ್ದೇನೆ.
ದಿನೇಶ್ ಗೂಳಿಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ
----------
ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.
ಡಿ.ಎನ್. ಮೈಲಾರಪ್ಪ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ
*ಬಾಕ್ಸ್*
ಸಾವಿರಾರು ಕೋಟಿ ರೂ. ಅನರ್ಹರ ಪಾಲು
ಅನ್ನಭಾಗ್ಯ ಯೋಜನೆಗೆ ಸರ್ಕಾರ ಕಳೆದ ಎರಡು ವರ್ಷದಲ್ಲಿ 15 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಇದರಲ್ಲಿ ಸಾವಿರಾರು ಕೋಟಿ ಅನರ್ಹರ ಪಾಲಾಗುತ್ತಿದೆ. ಖಾಸಗಿ ಗೋದಾಮು, ಶೆಡ್‌ಗಳಲ್ಲಿ ಸಂಗ್ರಹಿಸಿ ಆ ನಂತರ ದಂಧೆಕೋರರು ಬೇರೆಡೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.