ಕಾಳಮ್ಮನ ಕೊಪ್ಪಲಿನಲ್ಲಿ ಕಾಳಿಕಾಂಬ ರಥೋತ್ಸವ

IMG-20230526-WA0119
Published on

ಸಾಲಿಗ್ರಾಮ: ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಕಾಳಿಕಾಂಬ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ನಡುವೆ ಅತ್ಯಂತ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.

ಕಾಳಮ್ಮ ತಾಯಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿಯನ್ನು ಮಾಡಲಾಯಿತು. ನಂತರ ದೇವರ ಮೂರ್ತಿಯನ್ನು ಮತ್ತು ರಥೋತ್ಸವದ ಕಳಸವನ್ನು ಮಂಗಳ ವಾದ್ಯಗಳು ಹಾಗೂ ಹೆಣ್ಣು ಮಕ್ಕಳು ಕಳಸದೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ರಥವನ್ನು ವಿಶೇಷವಾಗಿ ಸಿಂಗರಿಸಿ ಶ್ರೀ ಕಾಳಮ್ಮ ತಾಯಿಯ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ದೇವಸ್ಥಾನದ ಸುತ್ತ ರಥವನ್ನು ಎಳೆಯಲಾಯಿತು. ಭಕ್ತರುಗಳು ರಥಕ್ಕೆ ಹಣ್ಣು-ದವನವನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮತ್ತೊಂದೆಡೆ ದೇವರಿಗೆ ಭಕ್ತರುಗಳು ಹಾಗೂ ಸಾರ್ವಜನಿಕರು ಪೂಜೆಯನ್ನು ಸಲ್ಲಿಸಿದರು.
ರಥೋತ್ಸವದಲ್ಲಿ ಚನ್ನರಾಯಪಟ್ಟಣ, ಸಾಲಿಗ್ರಾಮ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಹೊಳೆನರಸೀಪುರ, ಕೆ.ಆರ್.ಪೇಟೆ, ಅರಕಲಗೂಡು, ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಕೊಡಗು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರುಗಳು ಪಾಲ್ಗೊಂಡಿದ್ದರು.

ಜಾತ್ರೆಯ ಅಂಗವಾಗಿ ಹಣ್ಣು ಕಾಯಿ, ಬಳೆ, ಸಿಹಿ ತಿಂಡಿಗಳು, ಆಟಿಕೆ ಸಾಮಾನುಗಳು, ಗೃಹ ಉಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ತಂಪು ಪಾನೀಯಗಳು ಸೇರಿದಂತೆ ವಿವಿಧ ಮಾದರಿಯ ಅಂಗಡಿಗಳು ತೆರೆಯಲಾಗಿತ್ತು.
ಸಾಲಿಗ್ರಾಮ ಪೊಲೀಸ್ ಠಾಣಾ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದರು. ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಶ್ರೀ ಕಾಳಿಕಾಂಬ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸಲಾಯಿತು. ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಮಾಡಲಾಯಿತು. ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.

ರಥೋತ್ಸವದಲ್ಲಿ ನೂತನ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ನಿವೃತ್ತ ಮುಖ್ಯ ಶಿಕ್ಷಕ ಎನ್.ಅಜ್ಜಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಎಚ್.ಟಿ.ಮಂಜಪ್ಪ, ಗ್ರಾ.ಪಂ.ಅಧ್ಯಕ್ಷ ತುಳಸಿರಾಮ್, ಸದಸ್ಯರುಗಳಾದ ಕೆ.ಎಸ್.ಕೃಷ್ಣೇಗೌಡ, ಡಿ.ಕೃಷ್ಣ, ದಮಯಂತಿ ಮಹದೇವ್, ಜಯಮ್ಮ ಸ್ವಾಮಿನಾಯಕ, ಅಂಬಿಕಾಕೃಷ್ಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net