ಕಾಳಗಿಯಲ್ಲಿ ಸದ್ದು ಮಾಡಿದ ಬುಲ್ಡೋಜರ್​

KALAGI 1
ಕಾಳಗಿಯ ಮುಖ್ಯ ಬಜಾರ್​ನಲ್ಲಿ ರಸ್ತೆ ಅಗಲೀಕರಣ ಕಾರ್ಯ ನಡೆಸಲಾಯಿತು.
Published on

ಕಾಳಗಿ: ಕಳೆದ ೧೨ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದಲ್ಲಿನ ಪ್ರಮುಖ ರಸ್ತೆಯ ಅಗಲೀಕರಣ ಕಾರ್ಯಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಇದರೊಂದಿಗೆ ಕಾಳಗಿ ಸುಂದರೀಕರಣಕ್ಕೆ ಮೊದಲ ಹೆಜ್ಜೆ ಇಟ್ಟಂತಾಗಿದೆ.

ಶನಿವಾರ ಬೆಳಗ್ಗೆ ಗ್ರೇಡ್-೧ ತಹಸೀಲ್ದಾರ್ ರಾಜಕುಮಾರ ಜಾಧವ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್, ಸಿಪಿಐ ವಿನಾಯಕ ನೇತೃತ್ವದಲ್ಲಿ ಹೆಚ್ಚಿನ ಸಿಬ್ಬಂದಿ ಜೆಸಿಬಿಯೊಂದಿಗೆ ಬಜಾರ್‌ಗೆ ಭೇಟಿ ನೀಡಿ, ಅಂಗಡಿಗಳನ್ನು ತೆರವುಗೊಳಿಸಿದರು. ಸುಮಾರು ೩ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ಜರುಗಿತು. ಅಗಲೀಕರಣ ವೇಳೆ ಯಾವುದೇ ಅವಘಡ ಸಂಭವಿಸದಿರಲಿ ಎಂಬ ಕಾರಣಕ್ಕಾಗಿ ಜೆಸ್ಕಾಂನಿಂದ ಮುಖ್ಯ ಬಜಾರ್ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಪಿಎಸ್‌ಐ ಹುಲಿಗೆಪ್ಪ ಪೂಜಾರಿ, ಅಧಿಕಾರಿಗಳಾದ ದೇವಿಂದ್ರಪ್ಪ ಕೋರವಾರ, ಆಕಾಶ ರಾಠೋಡ್, ಸುರೇಶ ಗಾಯಕವಾಡ, ದತ್ತಾತ್ರೇಯ ಕಲಾಲ್, ಕಾಳೇಶ್ವರ ಮಡಿವಾಳ, ಉದಯಕುಮಾರ ಸಿಂಗಶೆಟ್ಟಿ, ವಿಶಾಲ ಮೋಟಗಿ ಸೇರಿ ೫೦ ಪುರಸಭೆ ಸಿಬ್ಬಂದಿ, ೪೦ ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.

೨ ತಿಂಗಳಲ್ಲಿ ಸಿದ್ಧವಾಗಲಿದೆ ಸುಂದರ ಬಜಾರ್

ಇಕ್ಕಟ್ಟಿನಲ್ಲಿ ಪ್ರದೇಶದಲ್ಲಿ ಬಜಾರ್ ಇರುವುದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಲು ಆಗುತ್ತಿರಲಿಲ್ಲ. ಇದೀಗ ರಸ್ತೆ ಅಗಲೀಕರಣ ಮಾಡಿದ್ದರಿಂದ ೨ ತಿಂಗಳಲ್ಲಿ ಸುಂದರ ಬಜಾರ್ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ೨೦೧೮-೧೯ನೇ ಸಾಲಿನ ವಿಶೇಷ ಹಣಕಾಸು ಯೋಜನೆಯಡಿ ೭೦ ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ತಲಾ ೩೫ ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸಲಾಗುವುದು ಎಂದು ಮುಖ್ಯಾಧಿಕಾರಿ ತೇಲಂಗ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net