ಕಾಳಗಿ ಸಿಪಿಐ, ಪಿಎಸ್ಐ ತಲೆದಂಡ

KLB_BHOJARAJ RATHOD (CPI)
Published on

ಕಲಬುರಗಿ: ಗಾಂಜಾ ದಂಧೆ ಇದೀಗ ಜಿಲ್ಲೆಯ ಪೊಲೀಸರ ಕೊರಳು ಸುತ್ತಿಕೊಳ್ಳುತ್ತಿದೆ. ಲಚ್ಚು (ಲಕ್ಷ್ಮಣ) ನಾಯಕ ತಾಂಡಾದಲ್ಲಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳು ಸೇರಿ ಸ್ಥಳೀಯ ಐವರು ಪೊಲೀಸರ ತಲೆದಂಡವಾಗಿದೆ.
ಕಾಳಗಿ ಸಿಪಿಐ ಭೋಜರಾಜ ರಾಠೋಡ್, ಪಿಎಸ್ಐ ಬಸವರಾಜ ಚಿತಕೋಟಿ, ಎಎಸ್ಐ ನೀಲಕಂಠ, ಸಿಬ್ಬಂದಿ ಶರಣು ಮತ್ತು ಅನೀಲ್ ಸೇವೆಯಿಂದ ಅಮಾನತುಗೊಂಡಿದ್ದಾರೆ. ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
ಲಕ್ಷ್ಮಣ ನಾಯಕ ತಾಂಡಾದ ಕುರಿ ಫಾರಂ ನೆಲಮಹಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 6 ಕೋಟಿ ರೂ. ಮೌಲ್ಯದ 1350 ಕೆಜಿ ಗಾಂಜಾ ಚೀಲಗಳನ್ನು ಬೆಂಗಳೂರು ಪೊಲೀಸರ ತಂಡ ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿತ್ತು.
ತಾಂಡಾದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದರೂ ಪತ್ತೆ ಹಚ್ಚುವಲ್ಲಿ ಕಾಳಗಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಗಾಂಜಾ ವಶಪಡಿಸಿಕೊಳ್ಳಲು ಬಂದಿದ್ದ ಬೆಂಗಳೂರು ಪೊಲೀಸರು ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದು ಜಿಲ್ಲಾ ಪೊಲೀಸ್ಗೆ ಕಪ್ಪು ಚುಕ್ಕೆ ಇಟ್ಟಂತಾಗಿತ್ತು. ಘಟನೆ ನಡೆದ ತಕ್ಷಣ ಐಜಿಪಿ ಮನೀಶ್ ಖರ್ಬಿಕರ್ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ ಅವರನ್ನು ಕರೆಸಿ ಚರ್ಚಿಸಿ ಗಾಂಜಾ ಪತ್ತೆ ಹಚ್ಚುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಆದೇಶ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಇಲಾಖೆ ವಿಚಾರಣೆ ಕಾದಿರಿಸಿ ಸಿಪಿಐ, ಪಿಎಸ್ಐ, ಎಎಸ್ಐ ಮತ್ತು ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net