ಕಾಳಗಿ; ಗುಂಡಿಗೆಗೆ ಗುಂಡಿಟ್ಟರೂ ಗುಡ್ಡ ಬಿಡಲ್ಲ

PH 24
Published on

ಕಾಳಗಿ: ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ರೇವಣಸಿದ್ಧೇಶ್ವರ ಗುಡ್ಡವನ್ನು ಕಮಲಾಪುರ ತಾಲೂಕಿಗೆ ಸೇರ್ಪಡೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಮಠಾಧೀಶರು, ಸರ್ವಪಕ್ಷ ಮುಖಂಡರು, ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರು ಕಂದಗೂಳ ಕ್ರಾಸ್‌ನ ಹೆದ್ದಾರಿಯಲ್ಲಿ ಸಂಚಾರ ತಡೆದು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಭೌಗೋಳಿಕ ಹಾಗೂ ವೈಜ್ಞಾನಿಕ ಆಧಾರದಂತೆ ರೇವಗ್ಗಿ ಗುಡ್ಡ ಕಾಳಗಿ ತಾಲೂಕಿನಲ್ಲಿದೆ. ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಹೀಗಿದ್ದರೂ ಸರ್ಕಾರ ಕಮಲಾಪುರ ತಾಲೂಕಿಗೆ ಸೇರಿಸಿರುವುದು ದುರದೃಷ್ಟಕರ. ತಾಲೂಕಿನ ಯಾವ ಗ್ರಾಮವನ್ನಾದರೂ ಕಮಲಾಪುರಕ್ಕೆ ಸೇರಿಸಿ. ಆದರೆ ರೇವಣಸಿದ್ಧೇಶ್ವರ ಗುಡ್ಡ ಮತ್ತು ಗೊಣಗಿ ಕಾಳಗಿಯಲ್ಲೇ ಇರಲಿ. ಈ ವಿಚಾರವಾಗಿ ನಾವೆಲ್ಲರೂ ಸ್ನೇಹಪರವಾಗಿರಲು ಸಿದ್ಧ, ಬೃಹತ್ ಹೋರಾಟ ನಡೆಸಲು ಸೈ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇದೀಗ ಶ್ರಾವಣ ಮಾಸ. ಮುಂದಿನ ಸೋಮವಾರ (ಸೆ.4) ಜಾತ್ರೋತ್ಸವ ನಡೆಯಲಿದೆ. ಇಂತಹ ಸಮಯದಲ್ಲಿ ಗುಡ್ಡದಲ್ಲಿ ಕಮಲಾಪುರ ವ್ಯಾಪ್ತಿಗೆ ಸೇರಿಸಿರುವ ಬಗ್ಗೆ ಯಾವುದಾದರೂ ಬೋರ್ಡ್, ಬ್ಯಾನರ್ ಅಳವಡಿಸಲು ಮುಂದಾದರೆ ಸರಿಯಿರಲ್ಲ. ಸರ್ಕಾರ ತನ್ನ ಹಠ ಹೀಗೇ ಮುಂದುವರಿಸಿದರೆ ಸಂಭವನೀಯ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಭಕ್ತಿತಾಣ ಗುಡ್ಡ ನಮ್ಮೆಲ್ಲರ ಗುಂಡಿಗೆ ಇದ್ದಂತೆ. ನಮ್ಮ ಗುಂಡಿಗೆಗೆ ಗುಂಡಿಕ್ಕಿದರೂ ಗುಡ್ಡ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಟಕಲ್ ವಿರಕ್ತ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ, ಹಿರೇಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಗೌರಿಗುಡ್ಡದ ಶ್ರೀ ರೇವಣಸಿದ್ಧ ಶರಣರು, ಸೂಗೂರ(ಕೆ) ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಶ್ರೀ ಚಂದ್ರಶೇಖರಯ್ಯ ಸ್ವಾಮೀಜಿ, ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೊಣಗಿ, ರೇವಣಸಿದ್ದ ಬಡಾ, ರಾಜಶೇಖರ ಗುಡದಾ, ಸಂತೋಷ ಹಂದ್ರೂಳಿ, ರೇವಣಸಿದ್ದಪ್ಪ ಪಾಲ್ಗೊಂಡಿದ್ದರು.

ಸಿದ್ಧನಿಗಾಗಿ ಸಿದ್ದರಾಮಯ್ಯನವರೆಗೂ ಪಾದಯಾತ್ರೆ!: ರೇವಗ್ಗಿ ಕಮಲಾಪುರ ತಾಲೂಕಿಗೆ ಸ್ಥಳಾಂತರಿಸಿರುವ ಆದೇಶ ತಕ್ಷಣ ವಾಪಸ್ ಪಡೆಯುವ ಮೂಲಕ ಸರ್ಕಾರ ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಶ್ರೀ ರೇವಣಸಿದ್ಧನನ್ನು ನಮ್ಮ ತಾಲೂಕಿನಲ್ಲೇ ಉಳಿಸಿಕೊಳ್ಳಲು ಗುಡ್ಡದಿಂದ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಗೌರಿಗುಡ್ಡದ ಶ್ರೀ ರೇವಣಸಿದ್ಧ ಶರಣರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net