

ಹನೂರು: ದಾರಿಯುದ್ದಕ್ಕೂ ದಾನಿಗಳಿಂದ ಊಟ, ತಿಂಡಿ, ಹಣ್ಣು, ನೀರು, ಕಾಫಿ, ಟೀ ವಿತರಣೆ, ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬ ಜಯಘೋಷ, ಅಲ್ಲಲ್ಲಿ ವಿಶ್ರಾಂತಿ ಪಡೆದು ಕಾಲ್ನಡಿಗೆಯ ಮೂಲಕ ಸಾಗರೋಪಾದಿಯಲ್ಲಿ ತೆರಳುತ್ತಿರುವ ಸಾವಿರಾರು ಭಕ್ತರು, ಮುಂಜಾಗ್ರತೆ ವಹಿಸಿರುವ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ…
ಇದು ತಾಲೂಕಿನ ಶಾಗ್ಯ ಗ್ರಾಮದ ಬಳಿಯ ಕಾವೇರಿ ವನ್ಯಜೀವಿ ಧಾಮದ ಮಾರ್ಗದಿಂದ ಗುಳ್ಯದವರೆಗೂ ಮಂಗಳವಾರ ಕಂಡು ಬಂದ ದೃಶ್ಯ.
ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಯುವ ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ರಾಮನಗರ, ಚನ್ನಪಟ್ಟಣ, ಬಿಡದಿ, ಕನಕಪುರ, ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬೊಮ್ಮಸಂದ್ರದ ಕಾವೇರಿ ನದಿಯನ್ನು ಹಗ್ಗದ ಮೂಲಕ ದಾಟಿ ಕಾವೇರಿ ವನ್ಯಜೀವಿ ವಲಯದ ಮೂಲಕ ಶಾಗ್ಯ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಾರೆ.
ಅದರಂತೆಯೇ ಈ ವರ್ಷವೂ ಮ.ಬೆಟ್ಟದಲ್ಲಿ ಫೆ.17 ರಿಂದ 5 ದಿನಗಳ ಕಾಲ ನಡೆಯುವ ಮಹಾ ಶಿವರಾತ್ರಿಗೆ ಜನಜಾತ್ರೆಯೇ ಹರಿದು ಬರುತ್ತಿದ್ದು, ಮಂಗಳವಾರ ಈ ಮಾರ್ಗವಾಗಿ ಸಾವಿರಾರು ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬ ಜಯಘೋಷವನ್ನು ಮೊಳಗಿಸುತ್ತಾ ಪ್ರಯಾಣ ಬೆಳೆಸಿದರು.
ದಾನಿಗಳಿಂದ ಸೇವಾ ಕಾರ್ಯ
ದೀಪಾವಳಿ, ಮಹಾಲಯ ಅಮಾವಾಸ್ಯೆ ಸೇರಿದಂತೆ ಮ.ಬೆಟ್ಟದಲ್ಲಿ ನಡೆಯುವ ಇನ್ನಿತರ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ತೆರಳುವುದು ಸಾಮಾನ್ಯ. ಆದರೆ ಮಹಾ ಶಿವರಾತ್ರಿಗೆ ರಾಮನಗರದ ಮೂಲಕ ಕಾವೇರಿ ನದಿಯನ್ನು ದಾಟಿ ಬೆಟ್ಟಕ್ಕೆ ತೆರಳುವುದು ವಿಶೇಷ. ಈ ಭಕ್ತರಿಗೆ ಮಾದಪ್ಪನ ಹೆಸರಿನಲ್ಲಿ ಸೇವೆ ನೀಡಲು ದಾನಿಗಳು ಅಲ್ಲಲ್ಲಿ ಶಾಮಿಯಾನವನ್ನು ಹಾಕಿ ಊಟ, ತಿಂಡಿ, ಹಣ್ಣು, ನೀರು, ಟೀ, ಕಾಫಿ, ಮಜ್ಜಿಗೆ, ಪಾನಕ ಇತ್ಯಾದಿ ಆಹಾರ ಪದಾರ್ಥಗಳನ್ನು ನೀಡುತ್ತಿರುವುದು ಕಳೆದ 2 ದಿನಗಳಿಂದ ಕಂಡುಬರುತ್ತಿದ್ದು, ಭಕ್ತರು ವಿಶ್ರಾಂತಿ ಪಡೆಯಲು ಶಾಮಿಯಾನ ಹಾಕಿ ಅನುಕೂಲ ಕಲ್ಪಿಸಲಾಗಿದೆ.
ಮುಂಜಾಗ್ರತಾ ಕ್ರಮ:
ಕಳೆದ ಮಹಾಶಿವರಾತ್ರಿಯ ವೇಳೆ ಕೆಆರ್‌ಎಸ್‌ನಲ್ಲಿ ಏಕಾಏಕಿ ನೀರು ಬಿಟ್ಟ ಪರಿಣಾಮ ಕಾವೇರಿ ನದಿಯಲ್ಲಿ ನಾಲ್ವರು ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಇನ್ನು ಕೆಲವರು ನಾಪತ್ತೆಯಾಗಿದ್ದರು. ಈ ದಿಸೆಯಲ್ಲಿ ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್ ಇಂತಹ ಘಟನೆ ಮರುಕಳುಹಿಸದಂತೆ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ದಡದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಭಕ್ತರ ಸುರಕ್ಷತೆಯ ಮೇಲೆ ನಿಗಾ ವಹಿಸಿದ್ದಾರೆ. ಕಾವೇರಿ ವನ್ಯಜೀವಿ ಧಾಮದ ಸಿಬ್ಬಂದಿ ಹಾಗೂ ಪೊಲೀಸರು ಸಾಥ್ ನೀಡಿದ್ದಾರೆ.
ಒಂದೆಡೆ ಕಾವೇರಿ ನದಿಯನ್ನು ದಾಟಿ ಕಾಲ್ನಡಿಗೆಯ ಮೂಲಕ ಭಕ್ತರು ಶಾಗ್ಯ ಮಾರ್ಗವಾಗಿ ಮ.ಬೆಟ್ಟಕ್ಕೆ ತೆರಳುತ್ತಿದ್ದರೆ ಇತ್ತ ಕೊಳ್ಳೇಗಾಲ- ಹನೂರು ಮಾರ್ಗವಾಗಿ ಮೈಸೂರು, ಚಾ.ನಗರ, ನಂಜನಗೂಡು, ಎಚ್.ಡಿ ಕೋಟೆ, ಮಳವಳ್ಳಿ ಹಾಗೂ ಈ ಭಾಗದ ಊರುಗಳಿಂದ ಹರಕೆ ಹೊತ್ತ ಭಕ್ತರು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ ತಂಡೋಪತಂಡವಾಗಿ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.
ಆದರೆ ಬಿಸಿಲಿನ ಝಳಕ್ಕೆ ಭಕ್ತರು ಅಲ್ಲಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿಯನ್ನೂ ಪಡೆಯುತ್ತಾ ಒಟ್ಟಿಗೆ ಸೇರಿ ಸಹಭೋಜನವನ್ನು ಸ್ವೀಕರಿಸುತ್ತಿರುವುದು ಹನೂರು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿದೆ. ಮಾದಪ್ಪನ ದೇವರು, ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತಾ ಭಕ್ತಿಭಾವದಿಂದ ತೆರಳುತ್ತಿದ್ದರೆ, ಯುವಕರು ತಮಟೆ ಬಾರಿಸುತ್ತಾ ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಾ ತೆರಳುತ್ತಿರುವುದು ವಿಶೇಷ.
ಸಂಪ್ರದಾಯ: ಮ.ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಬಹುತೇಕ ಭಕ್ತರು ಕನಿಷ್ಠ ನಾಲ್ಕೈದು ದಿನಗಳ ಕಾಲ ಅಲ್ಲಿಯೇ ನೆಲೆಸಿ ನಿತ್ಯ ನಡೆಯುವ ಪೂಜಾ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳುತ್ತಾರೆ. ಹಾಗಾಗಿ ವಿವಿಧೆಡೆಯಿಂದ ಆಗಮಿಸುವ ಭಕ್ತರು ಮಹದೇಶ್ವರಬೆಟ್ಟದಲ್ಲಿ ಅಡುಗೆ ತಯಾರಿಸಿ ಅನ್ನಸಂತರ್ಪಣೆ ನಡೆಸಿ ವಾಸ್ತವ್ಯ ಹೂಡುವುದು ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಆದ್ದರಿಂದ ಪ್ರತಿ ವರ್ಷವೂ ಮಹಾಶಿವರಾತ್ರಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.