

ಹಾಸನ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ನಿಜಕ್ಕೂ ದುಃಖದ ಸಂಗತಿ. ಸರ್ಕಾರದ ತಪ್ಪು ನಿರ್ಧಾರಗಳು ಮತ್ತು ಆಯೋಜನೆಯಲ್ಲಿನ ಮುನ್ನೆಚ್ಚರಿಕೆ ಕೊರತೆ ಕಾರಣ ಎಂದು ಮಾಜಿ ಸಚಿವ, ಶಾಸಕ ಎಚ್. ಡಿ. ರೇವಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಬೆಂಗಳೂರು ಕಮಿಷನರ್ ಆಗಿದ್ದ ದಯಾನಂದ್ ಅವರನ್ನು ಅಮಾನತು ಮಾಡಿರುವುದು ಸರ್ಕಾರದ ತಪ್ಪು ನಿರ್ಧಾರವಾಗಿದೆ. ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಈ ಅಮಾನತು ನನಗೆ ತೀವ್ರ ನೋವು ತಂದಿದೆ ಎಂದರು.
ಘಟನೆಯ ಹಿಂದಿನ ರಾತ್ರಿಯಿಂದ ಮುಂಜಾನೆವರೆಗೂ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಅಂದು ರಾತ್ರಿಯಿಡೀ ಪೊಲೀಸರು ಮಲಗಿಲ್ಲ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಏಕೆ ಆಯೋಜಿಸಿದರು? ಸರ್ಕಾರ ಒಂದೇ ದಿನದಲ್ಲಿ ಎಲ್ಲವನ್ನೂ ಮಾಡಬೇಕೆಂದು ಏಕೆ ತೀರ್ಮಾನಿಸಿತು? ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಕಷ್ಟವನ್ನು ಅರಿಯಬೇಕು. ಮಕ್ಕಳ ನೆನಪು ಬಂದರೆ ಆ ಪೋಷಕರು ಹೇಗೆ ತಡೆದುಕೊಳ್ಳುತ್ತಾರೆ? 25 ಲಕ್ಷ ಹಣ ಕೊಟ್ಟು ಜೀವ ತಂದುಕೊಡಲು ಸಾಧ್ಯವೇ? ಸರ್ಕಾರ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ರೇವಣ್ಣ, ಆರ್‌ಬಿಸಿಯವರು 25 ಲಕ್ಷ ರೂ. ಮತ್ತು ಕೆಎಸಿಎ ಸಂಸ್ಥೆ 25 ಲಕ್ಷ ರೂ. ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ದುರಂತದ ಬಗ್ಗೆ ತನಿಖೆ ನಡೆಸಿ, ಕಾರಣಕರ್ತರನ್ನು ಗುರುತಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ದಂಧೆಕೋರರಿಗೆ ಇಲಾಖೆಯೇ ಸಹಕಾರ ನೀಡುತ್ತಿದೆ. ಕಳೆದ ಒಂದು ಮುಕ್ಕಾಲು ವರ್ಷದಿಂದ ನಾನು ಏನನ್ನೂ ಮಾತನಾಡಿಲ್ಲ. ಆದರೀಗ ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ರೇವಣ್ಣ ಆರೋಪ ಮಾಡಿದರು.
ನಗರ, ಗ್ರಾಮೀಣ ಭಾಗ ಎನ್ನದೆ ಕೊಲೆ, ಸುಲಿಗೆ, ಸರಗಳ್ಳತನ, ದರೋಡೆಗಳು ರಾಜಾರೋಷವಾಗಿ ನಡೆಯುತ್ತಿವೆ. ಮನೆ-ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದೆ. ಮನೆಗಳಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಜೂಜುಕೋರರಿಗೆ, ಮಟ್ಕಾ ದಂಧೆಗೆ ಪೊಲೀಸ್ ಇಲಾಖೆಯಿಂದಲೇ ಬೆಂಬಲ ಸಿಗುತ್ತಿದೆ. ಬೆಳಗ್ಗೆ 6 ಗಂಟೆಗೆ ಮದ್ಯದ ಅಂಗಡಿಗಳು ತೆರೆಯುತ್ತಿವೆ ಎಂದು ಆರೋಪಗಳ ಸುರಿಮಳೆ ಗರೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷದವರ ಮೇಲೆ ಕಾನೂನುಬಾಹಿರವಾಗಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗುತ್ತಿದೆ. ರೌಡಿಶೀಟ್ ತೆರೆಯುವ ಬೆದರಿಕೆ ಹಾಕಲಾಗುತ್ತಿದೆ. ರೈತರ ಮೇಲೂ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಮೊಬೈಲ್ ಕಳವು ಇತ್ಯಾದಿ ದೂರುಗಳನ್ನು ಜೆಡಿಎಸ್ ಕಾರ್ಯಕರ್ತರು ನೀಡಲು ಹೋದರೆ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುತ್ತಿಲ್ಲ. ಈ ಎಸ್ಪಿ ಬಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸರನ್ನು ಕಂಡರೆ ಭಯವೇ ಇಲ್ಲದಂತಾಗಿದೆ ಎಂದು ದೂರಿದರು.
ಎಸ್ಪಿ ಅವರು ಕಾಂಗ್ರೆಸ್ ಸರ್ಕಾರ ಸದಾ ಇರಲಿದೆ ಎಂಬ ಭ್ರಮೆಯಲ್ಲಿದ್ದರೆ ಅದರಿಂದ ಹೊರ ಬರಬೇಕು. ಅಮಾಯಕರ ಮೇಲೆ ಕೇಸ್ ಹಾಕುತ್ತಾರೆ, ಕೊಲೆ ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಹಿಂದೆ ಹರಿರಾಂ ಶಂಕರ್ ಎಸ್ಪಿ ಆಗಿದ್ದಾಗ ತಪ್ಪು ಮಾಡಿದವರನ್ನು ಶಿಕ್ಷಿಸುತ್ತಿದ್ದರು. ಆದರೆ ಈಗ ಅಯೋಮಯವಾಗಿದೆ. ಎಎಸ್ಪಿ ವೆಂಕಟೇಶ್‌ನಾಯ್ಡು ಕಳ್ಳರ ಗ್ಯಾಂಗ್ ಮುಖ್ಯಸ್ಥರಾಗಿದ್ದಾರೆ ಪೊಲೀಸರೇ ಬೇಜಾರು ಮಾಡಿಕೊಂಡಿದ್ದಾರೆ. ಜೆಡಿಎಸ್‌ನವರು ತಪ್ಪು ಮಾಡಿದರೆ ಶಿಕ್ಷಿಸಲಿ, ಆದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸೋದು ಸರಿಯಲ್ಲ. ಶೀಘ್ರವೇ 8 ತಾಲೂಕಿನ ಮಾಹಿತಿ ಪಡೆದು ಸರ್ಕಾರಕ್ಕೆ ಪತ್ರ ಬರೆಯುವೆ. ಜತೆಗೆ ಹೋರಾಟದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ನಾನು ಆರು ಬಾರಿ ಶಾಸಕನಾಗಿ ಕೆಲಸ ನಿರ್ವಹಿಸಿದ್ದೇನೆ. ಇಷ್ಟೊಂದು ಪ್ರಮಾಣದಲ್ಲಿ ಪೊಲೀಸ್ ಇಲಾಖೆ ಹದಗೆಟ್ಟಿರಲಿಲ್ಲ. ಜೆಡಿಎಸ್ ಪಕ್ಷವನ್ನು ಅಧಿಕಾರಿಗಳಿಂದ ಮುಗಿಸುವುದು ಭ್ರಮೆ ಎಂದ ಅವರು, ಬಸವಾಘಟ್ಟ ಗ್ರಾಪಂ ಸದಸ್ಯ ಏನೂ ಮಾಡದೇ ಇದ್ದರೂ ರೌಡಿ ಶೀಟ್ ಹಾಕುವ ಬೆದರಿಕೆ ಹಾಕುತ್ತೀರಿ. ಇದು ಬೇಡ. ಜಿಲ್ಲೆಯಲ್ಲಿ ಏನಾದರೂ ಆದರೆ ಅದಕ್ಕೆ ಎಸ್ಪಿಯೇ ಹೊಣೆ ಎಂದು ಎಚ್ಚರಿಸಿದರು.
ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಆದರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಾನು ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಮನೆ ಮನೆಗಳಲ್ಲಿ ಇಸ್ಪೀಟ್ ಆಡಿಸಲಾಗುತ್ತಿದೆ. ಇದನ್ನು ತಡೆಯಬೇಕು. ಇಲ್ಲದಿದ್ದರೆ ವಾಸ್ತವಾಂಶ ಬಯಲಿಗೆಳೆಯುತ್ತೇನೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಸಚಿವ ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಇದ್ದರು.