ಕಾಲ್ತುಳಿತಕ್ಕೆ ಮೃತಪಟ್ಟ ಭೂಮಿಕ್ ಅಂತ್ಯಕ್ರಿಯೆ

05_HSN_01A
ಗುರುವಾರ ಮೃತನ ಮನೆಗೆ ಸಂಸದ ಶ್ರೇಯಸ್ ಪಟೇಲ್ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
Published on

ಬೇಲೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಜೆ ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಯುವಕ ದುರಂತ ಅಂತ್ಯ ಕಂಡಿದ್ದಾನೆ.

ಗ್ರಾಮದ ಲಕ್ಷ್ಮಣ್ ಹಾಗೂ ಅಶ್ವಿನಿ ದಂಪತಿ ಪುತ್ರ ಭೂಮಿಕ್ (20) ಮೃತ. ಈತ ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಕಾಲೇಜು ಮುಗಿಸಿಕೊಂಡು ಸಂಜೆ ಸ್ನೇಹಿತರೊಂದಿಗೆ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ. ಆದರೆ, ಆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಘಟನೆ ಬಳಿಕ ಭೂಮಿಕ್ ತಾಯಿ ಸಾಕಷ್ಟು ಬಾರಿ ಕರೆ ಮಾಡಿದರು ಮೊಬೈಲ್ ರಿಸೀವ್ ಆಗಿಲ್ಲ. ಒಂದು ಗಂಟೆಯ ನಂತರ ನಿಮ್ಮ ಮಗ ಕಾಳ್ತುಳಿತದಲ್ಲಿ ಮೃತಪಟ್ಟಿದ್ದಾನೆ ಎಂದು ಮೊಬೈಲ್‌ನಲ್ಲಿ ಮಾಹಿತಿ ತಿಳಿಸಿದ್ದಾರೆ. ವಿಷಯ ಕೇಳಿ ತಾಯಿ ತೀವ್ರ ಅಸ್ವಸ್ಥಗೊಂಡಿದ್ದರು. ಇತ್ತ ಆಸ್ಪತ್ರೆಗೆ ತೆರಳಿ ಮಗನ ಶವವನ್ನು ವೀಕ್ಷಿಸಿ ತಮ್ಮ ಪುತ್ರ ಎಂದು ಖಚಿತಪಡಿಸಿಕೊಂಡಾಗ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.

20 ವರ್ಷಗಳ ಹಿಂದೆ ಲಕ್ಷ್ಮಣ್ ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿ ಸಣ್ಣ ಉದ್ಯಮ ಪ್ರಾರಂಭಿಸಿದ್ದರು. ನಂತರದಲ್ಲಿ ಉದ್ದಿಮೆ ಬೆಳೆದು ಪ್ರತಿಷ್ಠಿತ ಉದ್ಯಮಿಯಾಗಿದ್ದರು. ಹಬ್ಬ-ಹರಿದಿನ ಜಾತ್ರೆಯ ಸಂದರ್ಭದಲ್ಲಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಕೆಲ ತಿಂಗಳ ಹಿಂದೆ ಕುಪ್ಪಗೋಡು ಗ್ರಾಮದಲ್ಲಿ ನಡೆದ ಸುಗ್ಗಿ ಹಬ್ಬಕ್ಕೆ ಮಗನೊಂದಿಗೆ ಬಂದು ಸಂಭ್ರಮಿಸಿದ್ದರು. ಆದರೆ ಈಗ ಮತ್ತೆ ಅದೇ ಗ್ರಾಮಕ್ಕೆ ಮಗನ ಶವದೊಂದಿಗೆ ಬಂದಿರುವುದು ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಅತೀವ ನೋವುಂಟು ಮಾಡಿದೆ.

ಮೃತದೇಹವನ್ನು ಗುರುವಾರ ಬೆಳಗಿನ ಜಾವ ಐದು ಗಂಟೆಗೆ ಹುಟ್ಟೂರಿಗೆ ತರಲಾಯಿತು. ಸರ್ಕಾರ ಯಾವುದೇ ಭದ್ರತೆ ಇಲ್ಲದೆ, ಮುಂಜಾಗ್ರತೆ ಇಲ್ಲದೆ ಈ ರೀತಿ ಸಮಾರಂಭ ಏರ್ಪಾಡು ಮಾಡಿರುವುದು ನನ್ನ ಮಗ ಸೇರಿದಂತೆ ಹಲವು ಅಮಾಯಕರ ಪ್ರಾಣ ಹೋಗಿದೆ ಎಂದು ಪಾಲಕರು ಹಿಡಿಶಾಪ ಹಾಕಿದರು.

ಭೂಮಿಕ್ ಅಂತ್ಯಕ್ರಿಯೆಯೂ ಗುರುವಾರ ಸ್ವಗ್ರಾಮದಲ್ಲಿ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.

ಸಂಸದ ಶ್ರೇಯಸ್ ಪಟೇಲ್ ಸಾಂತ್ವನ

ಗುರುವಾರ ಮೃತನ ಮನೆಗೆ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಂಸದ ಶ್ರೇಯಸ್ ಮಾತನಾಡಿ, ಈ ದುರ್ಘಟನೆ ನಡೆಯಬಾರದಿತ್ತು. ಬದುಕಿ, ಬಾಳಬೇಕಿದ್ದ ಎಳೆಯ ಜೀವ ಅಳಿದಿವೆ. 2 ದಿನ ಬಿಟ್ಟು ಸಂಭ್ರಮಾಚರಣೆ ಮಾಡಬಹುದಿತ್ತು. ತುರ್ತಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಸೂತಕದ ಮನೆಯಲ್ಲಿ ರಾಜಕೀಯ ಮಾಡುವುದು ತಪ್ಪು. ಇದು ರಾಜ್ಯಕ್ಕೆ ಕರಾಳ ದಿನ, ಮರೆಲಾಗದ ದುರ್ಘಟನೆ. ಒಬ್ಬರೇ ಮಕ್ಕಳ ಪಾಲಕರಿಗೆ ನೋವೇನು ಎಂಬುದು ನನಗೆ ಗೊತ್ತು. ಮುಖ್ಯಮಂತ್ರಿಗಳು ತನಿಖೆಗೆ ಆದೇಶ ಮಾಡಿದ್ದಾರೆ. ಯಾವ ಇಲಾಖೆ ವೈಫಲ್ಯ ಇದೆ, ಯಾವ ಇಲಾಖೆಯದ್ದು ತಪ್ಪಿದೆ ಎಂಬುದು ವರದಿಯಲ್ಲಿ ಗೊತ್ತಾಗಲಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗಲೇಬೇಕು ಎಂದರು.

ವಿರಾಟ್ ಕೊಹ್ಲಿ ಮತ್ತು ತಂಡ ಬಂದಿತ್ತು, ಇಂಟಲಿಜೆನ್ಸ್‌ನವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಶ್ರೇಯಸ್, ಹಿಂದಿನ ದಿನ ನಾವು ಸೇರಿ ಎಲ್ಲರೂ ಸಂಭ್ರಮಾಚರಣೆ ಮಾಡಿದ್ದೆವು. ಅಷ್ಟು ಜನಸಂಖ್ಯೆ ಸೇರುತ್ತೆ ಎನ್ನುವ ಮಾಹಿತಿ ಇರಲಿಲ್ವಾ ಅವರಿಗೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರುತ್ತೆ. ಆರ್‌ಸಿಬಿ ಗೆದ್ದಿರುವುದು ನಮ್ಮ ಹೆಮ್ಮೆ. ಆದರೆ ಬೆಂಗಳೂರು ನಗರದ ವಿವಿಧ ಇಲಾಖೆಗಳು, ಪೊಲೀಸ್ ಇಲಾಖೆ ಮೇಲೆ ನನಗೆ ಅನುಮಾನ ಇದೆ. ಇಷ್ಟು ಮಾಹಿತಿ ಇದ್ದರೂ ಯಾಕೆ ಬಂದೋಬಸ್ತ್ ಸರಿಯಾಗಿ ಮಾಡಲಿಲ್ಲ. 11 ಜನರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎಚ್.ಕೆ.ಸುರೇಶ್ ಸಹ ಲಕ್ಷ್ಮಣ್ ದಂಪತಿಗೆ ಸಮಾಧಾನ ಮಾಡಿ, ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದರು. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಎಲ್ಲಿ ಲೋಪವಾಗಿದೆ ಎಂಬುದನ್ನು ತಿಳಿದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕೇವಲ ಪರಿಹಾರ ಕೊಡುವುದು ಮುಖ್ಯವಲ್ಲ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವುದು ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net