

ಧಾರವಾಡ: ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ಮಂಗಳವಾರ ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಆದರೆ, ಬಸ್ಪಾಸ್, ವಸತಿ ನಿಲಯ ಸೌಲಭ್ಯ ಕೊರತೆ… ಹೀಗೆ ಅನೇಕ ಕಾರಣಗಳಿಂದ ಕಾಲೇಜ್ಗಳತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿಲ್ಲ.
ಸುಮಾರು 8 ತಿಂಗಳ ಕಾಲ ಮನೆಯಲ್ಲೇ ಕಾಲ ಕಳೆದಿರುವ ವಿದ್ಯಾರ್ಥಿಗಳು ಈಗಾಗಲೇ ಆನ್ಲೈನ್ ತರಗತಿಗಳಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿ ಮೊದಲ ದಿನದಿಂದಲೇ ವಿದ್ಯಾರ್ಥಿಗಳು ಆಗಮಿಸಬಹುದು ಎಂಬ ನಿರೀಕ್ಷೆಯಲ್ಲೇ ಕಾಲೇಜಿನ ಸಿಬ್ಬಂದಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು. ಕಾಲೇಜು ಆವರಣ ಸ್ವಚ್ಛತೆ, ಸ್ಯಾನಿಟೈಸೇಷನ್, ಕೋವಿಡ್ ಪರೀಕ್ಷೆ, ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ಪಾಠ ಕೇಳುವ ವ್ಯವಸ್ಥೆ ಮಾಡಲಾಗಿದೆ.
ಧಾರವಾಡದ ಜೆಎಸ್ಎಸ್, ಕೆಸಿಡಿ, ಕಿಟೆಲ್ ಕಾಲೇಜ್ ಸೇರಿ ಬಹುತೇಕ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕರು, ಸಿಬ್ಬಂದಿ ಮಾತ್ರ ಹಾಜರಾಗಿದ್ದರೆ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಾಲೇಜ್ನತ್ತ ಮುಖ ಮಾಡಿದ್ದರು. ಹೀಗಾಗಿ ಕಾಲೇಜ್ ಆವರಣ, ತರಗತಿ ಕೋಣೆಗಳು ಬಿಕೋ ಎನ್ನುತ್ತಿದ್ದವು.
ಕಾಲೇಜ್ಗಳು ಬಂದ್ ಆಗಿದ್ದರೂ ಆನ್ಲೈನ್ ಪಾಠಗಳು ನಿರಾತಂಕವಾಗಿ ನಡೆಯುತ್ತಿವೆ. ಇದು ಮಾತ್ರವಲ್ಲದೆ ಉಪನ್ಯಾಸಕರು, ಸಿಬ್ಬಂದಿ ಸೇರಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ. ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಪಾಲಕರ ಒಪ್ಪಿಗೆ ಪತ್ರ ತರಬೇಕು. ಈ ಎಲ್ಲ ಕಾರಣಗಳಿಂದ ಬಹುತೇಕ ವಿದ್ಯಾರ್ಥಿಗಳು ಆಗಮಿಸಿಲ್ಲ. ಮುಂದಿನ ವಾರದಿಂದ ಮೊದಲಿನಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂಬುದು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಕಾಲೇಜ್ಗಳಲ್ಲಿ ಸಹ ಇದೇ ವಾತಾವರಣ ನಿರ್ವಣವಾಗಿತ್ತು. ಕವಿವಿಯ ಗಾಂಧಿ ಭವನ ಆವರಣದಲ್ಲಿ ಎಲ್ಲ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ಇನ್ನೂ 4 ದಿನಗಳ ಕಾಲ ಈ ಪರೀಕ್ಷೆ ನಡೆಸಲು ತೀರ್ವನಿಸಿದ್ದಾರೆ.
ಸರ್ಕಾರಗಳು ನೀಡಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಮಹಾವಿದ್ಯಾಲಯಗಳಿಗೆ ಸೂಚಿಸಲಾಗಿದೆ. ಕವಿವಿ ವ್ಯಾಪ್ತಿಯಲ್ಲಿ 296 ಕಾಲೇಜ್ಗಳಿದ್ದು, 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಮೊದಲ ದಿನ ಶೇ. 10-15ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಸತಿ ನಿಲಯದಲ್ಲಿ ಪ್ರತಿ ಕೋಣೆಗೆ ಒಬ್ಬರು ಮಾತ್ರ ವಾಸ ಮಾಡಬೇಕು ಎಂಬ ನಿಯಮ ವಿಧಿಸಲಾಗಿದೆ. ತರಗತಿಯಲ್ಲಿ ಹೆಚ್ಚಿನ ಸಂಖ್ಯೆ ಇದ್ದರೆ ಎರಡು ತರಗತಿ ನಡೆಸಲು ಸೂಚಿಸಲಾಗಿದೆ.| ಡಾ.ಕೆ.ಬಿ. ಗುಡಸಿ ಕರ್ನಾಟಕ ವಿವಿ ಕುಲಪತಿ
ಕಾಲೇಜ್ ಪ್ರಾರಂಭಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿನ ಭಯ ಹೋಗಲಾಡಿಸಲು ಇದು ಅನುಕೂಲ. ಮನೆಯಲ್ಲಿದ್ದು ಆನ್ಲೈನ್ ಮೂಲಕ ತರಗತಿಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಕಾಲೇಜಿನ ವಾತಾವರಣವೇ ಉತ್ತಮ. ಹೀಗಾಗಿ ಯಾವುದೇ ಭಯವಿಲ್ಲದೆ ಮೊದಲ ದಿನವೇ ತರಗತಿಗೆ ಆಗಮಿಸಿದ್ದೇವೆ.| ದೇವಪ್ಪ ಮಾಳಗಿ ಕವಿವಿ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ
ಕ್ರಮೇಣ ಹಾಜರಾತಿ ಹೆಚ್ಚಾಗಲಿದೆ: ಕೋವಿಡ್ ಬಳಿಕ ಕಾಲೇಜ್ ಆರಂಭಕ್ಕೆ ಮಂಗಳವಾರ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಲಿದೆ. ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಪಾಲಕರಲ್ಲಿ ನಿಧಾನವಾಗಿ ವಿಶ್ವಾಸ ಮೂಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕರೊನಾ ಹಾವಳಿಯ ಭಯದಿಂದ ಪಾಲಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಕೆಲ ತಿಂಗಳ ಹಿಂದೆ ಹೋಟೆಲ್ಗಳು ಆರಂಭ ಮಾಡಿದಾಗ ಪ್ರಾರಂಭದಲ್ಲಿ ನೀರಸ ಪ್ರತಿಕ್ರಿಯೆ ಇತ್ತು. ಇದೀಗ ಹೋಟೆಲ್ ಉದ್ಯಮ ಪಿಕ್ಅಪ್ ಆಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂದರು. ಬೆಂಗಳೂರಿನ ಸಂಪತ್ರಾಜ್ರನ್ನು ಕಾನೂನು ಪ್ರಕಾರ ಬಂಧಿಸಲಾಗಿದೆ. ಅವರು ಪೊಲೀಸರ ಕೈಗೆ ಸಿಗದೇ ತಲೆ ತಲೆಮರೆಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸೂಕ್ತ ವಿಚಾರಣೆಯಾಗಿ ತಕ್ಕ ಕ್ರಮವಾಗಲಿದೆ. ಸಚಿವ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು. ಈ ವಿಷಯದಲ್ಲಿ ಸಿಎಂ ಹಾಗೂ ಪಕ್ಷ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಬಹಳ ಜನ ಆಕಾಂಕ್ಷಿಗಳಿರುವುದು ನಿಜ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ. ಇಲ್ಲಿಯವರೆಗೆ ಸರಿದೂಗಿಸಿಕೊಂಡು ಬಂದಿದ್ದೇವೆ. ಎಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದರು.
ಬೆರಳೆಣಿಕೆಯಷ್ಟೇ ಬಂದರು: ರಾಜ್ಯ ಸರ್ಕಾರ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದರೂ ಹುಬ್ಬಳ್ಳಿ ನಗರದ ಕೆಲ ಕಾಲೇಜ್ಗಳಿಗೆ ಮಂಗಳವಾರ ವಿದ್ಯಾರ್ಥಿಗಳು ಆಗಮಿಸಲಿಲ್ಲ. ನಗರದ ಪ್ರತಿಷ್ಠಿತ ಇಂಜಿನಿಯರಿಂಗ್, ಪದವಿ ಕಾಲೇಜ್ಗಳು ಆರಂಭವಾಗಿವೆ. ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮದೊಂದಿಗೆ ವಿದ್ಯಾರ್ಥಿಗಳು ಆಗಮಿಸಲು ಸರ್ಕಾರ ಸೂಚನೆ ನೀಡಿತ್ತು. ಉಪನ್ಯಾಸಕರು ಹಾಜರಿದ್ದರೂ ವಿದ್ಯಾರ್ಥಿಗಳು ಬಂದಿರಲಿಲ್ಲ. ಹಬ್ಬದ ಮರು ದಿನ, ಬಸ್ ಪಾಸ್ ಹಾಗೂ ಇತರೆ ಕಾರಣದಿಂದಾಗಿ ವಿದ್ಯಾರ್ಥಿಗಳು ಬಾರದೇ ಇರಬಹುದು ಎಂದು ಉಪನ್ಯಾಸಕರು ವಿಶ್ಲೇಷಿಸುತ್ತಿದ್ದಾರೆ. ಕಾಲೇಜ್ಗೆ ಬಂದ ಕೆಲವೇ ವಿದ್ಯಾರ್ಥಿಗಳಿಗೆ ರ್ಯಾಪಿಡ್ ಆಂಟಿಜಿನ್ ಪರೀಕ್ಷೆ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಯಿತು.
ನೆಗೆಟಿವ್ ಬಂದವರಿಗೆ ಮಾತ್ರ ಪ್ರವೇಶ: ಕರೊನಾದಿಂದಾಗಿ 8 ತಿಂಗಳಿಂದ ಬಂದಾಗಿದ್ದ ಸ್ನಾತಕ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜ್ಗಳು ಮಂಗಳವಾರದಿಂದ ಆರಂಭಗೊಂಡಿವೆ. ಆದರೆ, ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು. ಕಲಘಟಗಿ ಗುಡ್ ನ್ಯೂಸ್ ವೆಲ್ಪೇರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅಂತಿಮ ವರ್ಷದ ಬಿಎ 58, ಬಿಕಾಂ 74 ವಿದ್ಯಾರ್ಥಿಗಳಲ್ಲಿ ಕೇವಲ 70 ವಿದ್ಯಾರ್ಥಿಗಳು ಆಗಮಿಸಿದ್ದರು. ದಾಸ್ತಿಕೊಪ್ಪ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 580 ವಿದ್ಯಾರ್ಥಿಗಳಲ್ಲಿದ್ದಾರೆ. ಬಿಎ, ಬಿಕಾಂ ಅಂತಿಮ ವರ್ಷದ ತರಗತಿಯಲ್ಲಿ 170 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ ಕೇವಲ 9 ವಿದ್ಯಾರ್ಥಿಗಳು ಬಂದಿದ್ದರು. ಇವೆರಡೂ ಕಾಲೇಜ್ಗಳಲ್ಲಿ ಕೋವಿಡ್-19 ಟೆಸ್ಟ್ ಕಡ್ಡಾಯವಾಗಿದೆ. ವಿದ್ಯಾರ್ಥಿಗಳನ್ನು ಸ್ಯಾನಿಟೈಸ್, ಥರ್ಮಲ್ ಸ್ಕೀನಿಂಗ್ವಾಡಿ, ನೆಗೆಟಿವ್ ಬಂದವರನ್ನು ಮಾತ್ರ ಕಾಲೇಜ್ ಕೊಠಡಿಗಳೊಳಗೆ ಕಳುಹಿಸಲಾಯಿತು. ಕೊಠಡಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಬೋಧನೆ ಮಾಡಲಾಯಿತು ಎಂದು ಗುಡ್ ನ್ಯೂಸ್ ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜ ಬಿರಾದರ ತಿಳಿಸಿದರು.
ಥರ್ಮಲ್ ಸ್ಕೀನಿಂಗ್: ಕಾಲೇಜ್ಗೆ ಅತಿ ಕಡಿಮೆ ವಿದ್ಯಾರ್ಥಿಗಳು ಬಂದಿದ್ದರಿಂದ ಪಾಲಕರ ಪರವಾನಗಿ ಪತ್ರ ತರುವಂತೆ ಅವರಿಗೆ ತಿಳಿಸಲಾಗಿದೆ. ಬಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕೀನಿಂಗ್ ಮಾಡಲಾಗುತ್ತಿದೆ ಎಂದು ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಸಿ. ಗುಮ್ಮಗೊಳಮಠ ತಿಳಿಸಿದರು.
ಎಂಟು ತಿಂಗಳ ನಂತರ ಕಾಲೇಜ್ಗೆ ಬಂದಿದ್ದು ಖುಷಿಯಾಗಿದೆ. ಪಾಠಗಳು ಎಂದಿನಂತೆ ಆರಂಭಗೊಂಡರೆ ನಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ.| ನಿಂಗರಾಜ ಲಮಾಣಿ, ವಿದ್ಯಾರ್ಥಿ
ಕರೊನಾದಿಂದ ಅಭ್ಯಾಸವು ಕುಂಠಿತವಾಗಿತ್ತು. ಕಾಲೇಜ್ಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡರೆ ನಮ್ಮ ಕನಸು ಸಾಕಾರಗೊಳಿಸಲು ಸಹಕಾರಿಯಾದಂತಾಗುತ್ತದೆ.| ಮಂಜುಳಾ ನಾರೇನವರ, ವಿದ್ಯಾರ್ಥಿ
ಬಿಕೋ ಎನ್ನುತ್ತಿದ್ದ ಕಾಲೇಜ್ಗಳು: ಅಣ್ಣಿಗೇರಿ: ಕರೊನಾದಿಂದ ಬಂದಾಗಿದ್ದ ಸ್ಥಳೀಯ ಎಂ.ಬಿ. ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಅಮೃತೇಶ್ವರ ಕಲಾ ಹಾಗೂ ವಾಣಿಜ್ಯ ಕಾಲೇಜ್ ಮಂಗಳವಾರ ಆರಂಭವಾಗಿವೆ. ಆದರೆ, ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಎಂ.ಬಿ. ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗೆ ಬಂದ 12 ವಿದ್ಯಾರ್ಥಿಗಳು, 4 ವಿದ್ಯಾರ್ಥಿನಿಯರು, ಶಿಕ್ಷಕರಿಗೆ ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಂಡು, ಕೋವಿಡ್ ಪರೀಕ್ಷೆ ಮಾಡಲಾಯಿತು. ಆದರೆ, ವಿದ್ಯಾರ್ಥಿಗಳು ಪಾಲಕರಿಂದ ಒಪ್ಪಂದ ಪತ್ರ ತರದಿರುವುದು ಹಾಗೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಾರದ ಕಾರಣ ಮರಳಿ ಮನೆಗೆ ಕಳುಹಿಸಲಾಯಿತು ಎಂದು ಕಾಲೇಜ್ ಪ್ರಭಾರಿ ಪ್ರಾಂಶುಪಾಲ ಬಸವರಾಜ ಎನ್. ಹೊಸಮನಿ ತಿಳಿಸಿದರು. ಸರ್ಕಾರದ ಆದೇಶದಂತೆ ಸ್ಯಾನಿಟೈಸರ್, ಪರಸ್ಪರ ಅಂತರ, ಶಿಕ್ಷಕರಿಗೆ ತಪಾಸಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಯಾವುದೇ ವಿದ್ಯಾರ್ಥಿ, ವಿದ್ಯಾರ್ಥಿನಿ ಕಾಲೇಜ್ಗೆ ಬಂದಿಲ್ಲ ಎಂದು ಅಮೃತೇಶ್ವರ ಕಲಾ ಹಾಗೂ ವಾಣಿಜ್ಯ ಕಾಲೇಜ್ ಪ್ರಾಂಶುಪಾಲ ಪಾಂಡುರಂಗ ಕೋಕಾಟಿ ತಿಳಿಸಿದರು.