

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಧೀನದ ಮಹಾರಾಜ ಹಾಗೂ ಯುವರಾಜ ಕಾಲೇಜುಗಳಿಗೆ ಪ್ರಾಚಾರ್ಯರ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ನೇಮಕಾತಿಗಾಗಿ ಹೊರಡಿಸಿರುವ ಪ್ರಕಟಣೆಯು ಮೀಸಲಾತಿ ಪಾಲನೆಯಿಂದ ತಪ್ಪಿಸಿಕೊಳ್ಳುವ ಉದ್ದೇಶವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿ ಈ ಬಗ್ಗೆ ಗಮನ ಹರಿಸಿ ಈ ಪ್ರಕಟಣೆಯನ್ನು ರದ್ದುಗೊಳಿಸಬೇಕು ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರಕಲವಾಡಿ ನಾಗೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಎರಡೂ ಕಾಲೇಜುಗಳಿಗೆ ಪ್ರಾಚಾರ್ಯರ ನೇಮಕಾತಿಗಾಗಿ ಜೂ.11ರಂದು ಪ್ರಕಟಣೆ ಹೊರಡಿಸಲಾಗಿದೆ. ಈ ಎರಡೂ ಕಾಲೇಜುಗಳಲ್ಲದೆ ಲಲಿತಕಲಾ ಕಾಲೇಜು, ಸಂಜೆ ಕಾಲೇಜುಗಳಲ್ಲಿಯೂ ಪ್ರಾಚಾರ್ಯರ ಹುದ್ದೆ ಖಾಲಿ ಇವೆ.
ಒಂದು ವೇಳೆ ಈ ನಾಲ್ಕು ಹುದ್ದೆಗಳನ್ನು ಒಂದೇ ಸಲ ನೇಮಕಕ್ಕೆ ಮುಂದಾದರೆ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮೀಸಲಾತಿ ನೀಡಬೇಕಾಗುತ್ತದೆ. ಹೀಗಾಗಿ ಇದನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಕೇವಲ ಎರಡೇ ಕಾಲೇಜುಗಳಿಗೆ ನೇಮಕಕ್ಕೆ ಮುಂದಾಗಲಾಗಿದೆ ಎಂದು ದೂರಿದರು.
ಈ ಕ್ರಮದಿಂದ ಮೀಸಲಾತಿ ನಿಯಮ ಉಲ್ಲಂಘನೆ ಆಗುತ್ತಿದೆ. ಇದಕ್ಕೆ ಕಾರಣರಾಗಿರುವ ಕುಲಪತಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ನೇಮಕಾತಿಗೆ ಮುಂದಾದರೆ ಪ್ರಗತಿಪರ ಸಂಘಟನೆಗಳೊಟ್ಟಿಗೆ ಸೇರಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ವಕೀಲ ಆರ್. ಲಕ್ಷ್ಮಣ್, ಮುಖಂಡರಾದ ಬಸಪ್ಪ, ಮಂಜುನಾಥ್, ಸ್ವಾಮಿ ಎಚ್.ನಾಗನಹಳ್ಳಿ, ಬಸವರಾಜು ಇದ್ದರು.