ಕಾಲೇಜು ಸೇರ್ಪಡೆಗಿಲ್ಲ ದಂಡನಾ ಶುಲ್ಕ

mangalore-university nw
Published on

ಉಳ್ಳಾಲ: ಕೋವಿಡ್-19 ಸಂಬಂಧ ವಿವಿ ನಿರ್ಣಯದಂತೆ ಈ ಬಾರಿ ಯಾವುದೇ ದಂಡನಾ ಶುಲ್ಕವಿಲ್ಲದೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

ಮಂಗಳೂರು ವಿವಿ ಸೆನೆಟ್ ಸಭಾಂಗಣದಲ್ಲಿ ಶೈಕ್ಷಣಿಕ ಮಂಡಳಿಯ 2020-21ನೇ ಸಾಲಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಂದು ವಿವಿಗಳ ಡೀನ್‌ಗಳು, ಪ್ರಾಧ್ಯಾಪಕರು ಡ್ರಗ್ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕಿದ್ದು, ಸಂಸ್ಥೆಯ ಅಕ್ಕಪಕ್ಕದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಬೇಕು. ಈ ಬಗ್ಗೆ ಸಂಯೋಜಿತ ಕಾಲೇಜುಗಳ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಿಗೆ ಪತ್ರ ಬರೆದು ಎಚ್ಚರಿಸಲಾಗುವುದು ಎಂದು ಹೇಳಿದರು.

ಕಾಲೇಜುಗಳಲ್ಲಿ ಕೊಂಕಣಿ ಸ್ನಾತಕೋತ್ತರ ಅಧ್ಯಯನಕ್ಕೆ ಸಮ್ಮತಿ ನೀಡಲಾಗಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ಸಂಯೋಜಿತ ಕಾಲೇಜುಗಳ ಕ್ಯಾಂಪಸ್ ಡ್ರಗ್‌ಮುಕ್ತ ಆಗಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ವಿವಿ ಮುಂದಾಗಿದ್ದು, ಅದಕ್ಕಾಗಿ ಪೊಲೀಸ್ ಇಲಾಖೆಯ ಜತೆಗೂಡಿ ಮಾಹಿತಿ ಹಂಚಿಕೊಳ್ಳಲಾಗುವುದು. ನೂತನವಾಗಿ ಆರಂಭಗೊಳ್ಳಲಿರುವ ಮಲ್ಲಿಕಟ್ಟೆಯಲ್ಲಿರುವ ಎ ಆ್ಯಂಡ್ ಎಂ ಎಜುಕೇಶನ್ ಕಾಲೇಜ್ ಆಫ್ ಕ್ರಿಯೇಟಿವಿಟಿ ಆ್ಯಂಡ್ ಟೆಕ್ನಾಲಜಿ ಕಾಲೇಜು, ಸ್ವಸ್ತಿಕಾ ನ್ಯಾಷನಲ್ ಸ್ಕೂಲ್, ಕುನಿಲ್ ಜಿ.ಪಿ. ಕಾಲೇಜಿಗೆ ಸಂಯೋಜನೆ ನೀಡಲಾಗಿದೆ ಎಂದು ತಿಳಿಸಿದರು. ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಮತ್ತು ಹಣಕಾಸು ಅಧಿಕಾರಿ (ಪ್ರಭಾರ) ಪ್ರೊ.ಬಿ.ನಾರಾಯಣ ಸಭೆಯಲ್ಲಿ ಉಪಸ್ಥಿತರಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ)ಪರಿಣಾಮಕಾರಿ ಮತ್ತು ಶೀಘ್ರ ಅನುಷ್ಠಾನಗೊಳಿಸುವ ಸಲುವಾಗಿ ವಿವಿ ವಿಷಯವಾರು ಪ್ರಾಧ್ಯಾಪಕರು, ಶೈಕ್ಷಣಿಕ ಮಂಡಳಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನೊಳಗೊಂಡ 9 ಉಪಸಮಿತಿಗಳನ್ನು ರಚಿಸಿದ್ದು, ಎಲ್ಲ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರು ಅಧ್ಯಕ್ಷರಾಗಿರುತ್ತಾರೆ. ಪ್ರೊ.ಪಿ.ಎಸ್.ಯಡಪಡಿತ್ತಾಯ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net