

ಬೆಂಗಳೂರು ಗ್ರಾಮಾಂತರ: ರಾಜ್ಯದೆಲ್ಲೆಡೆ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸೋಮವಾರ ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲವರ ಕಂಡುಬಂತು.
ವರ್ಷಗಟ್ಟಲೆ ಮನೆಯಲ್ಲಿ ಕುಳಿತು ಆನ್‌ಲೈನ್ ಪಾಠ ಕೇಳಿ ಬೇಸತ್ತಿದ್ದ ವಿದ್ಯಾರ್ಥಿಗಳು ಸಂಭ್ರಮದಿಂದ ಕಾಲೇಜುಗಳತ್ತ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳನ್ನು ಉಪನ್ಯಾಸಕ ವೃಂದ ಸಂಭ್ರಮದಿಂದ ಸ್ವಾಗತಕೋರಿತು. ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಎಲ್ಲ ಕಾಲೇಜುಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿತ್ತು, ಪರಸ್ಪರ ಅಂತ ಕಾಯ್ದುಕೊಂಡು ಕೊಠಡಿಗಳಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಮಾರ್ಕಿಂಗ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಮಾರ್ಕಿಂಗ್ ಮಾಡಿದ್ದ ಸ್ಥಳಗಳಲ್ಲಿ ಕುಳಿತು ಪಾಠವನ್ನು ಆಲಿಸಿದರು.
2 ಗಂಟೆ ಸೀಮಿತ:
ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ ಸೋಮವಾರ ಎರಡು ಅಥವಾ ಮೂರು ಗಂಟೆಗಳಿಗಷ್ಟೇ ಪಾಠಗಳನ್ನು ಸೀಮಿತಗೊಳಿಸಲಾಯಿತು, ಆ.1ರಿಂದ ಸಂಪೂರ್ಣ ತರಗತಿ ಆರಂಭಿಸುವ ಬಗ್ಗೆ ಆಡಳಿತ ಮಂಡಳಿಗಳು ಚಿಂತಿಸಿವೆ ಎನ್ನಲಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳೊಂದಿಗೆ ಔಪಚಾರಿಕ ಮಾತುಕತೆಗಳೊಂದಿಗೆ ತರಗತಿಗಳನ್ನು ಮುಗಿಸಲಾಯಿತು. ಬಹುಪಾಲು ಸರ್ಕಾರಿ ಕಾಲೇಜುಗಳು ಸೋಮವಾರದಿಂದಲೇ ಆರಂಭಗೊಂಡರೂ ಕೆಲವು ಖಾಸಗಿ ಶಾಲೆಗಳು ರಿಸ್ಕ್ ತೆಗೆದುಕೊಳ್ಳುವುದೇಕೆ ಎಂದು ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಈಗಾಗಲೇ ಆನ್‌ಲೈನ್ ತರಗತಿ ನಡೆಯುತ್ತಿರುವುದರಿಂದ ಪಾಲಕರ ಅಭಿಪ್ರಾಯ ಸಂಗ್ರಹಿಸಿ ಇನ್ನೆರಡು ವಾರದ ಬಳಿಕ ಕಾಲೇಜು ತೆರೆಯಲು ಚಿಂತನೆ ನಡೆಸಿವೆ ಎನ್ನಲಾಗಿದೆ.
ನೆಲಮಂಗದಲ್ಲಿ ಕಾಲೇಜು ಆರಂಭ: ನೆಲಮಂಗಲ ನಗರದಲ್ಲಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿದೆ.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 843 ವಿದ್ಯಾರ್ಥಿಗಳ ಪೈಕಿ 232 ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ನಗರಸಭೆ ವ್ಯಾಪ್ತಿಯ ಸಿದ್ಧಗಂಗಾ ಪ್ರಥಮದರ್ಜೆ ಕಾಲೇಜಿನಲ್ಲಿ 500 ವಿದ್ಯಾರ್ಥಿಗಳ ಪೈಕಿ 186 ವಿದ್ಯಾರ್ಥಿಗಳು, ನಗರದ ಬಸವೇಶ್ವರ ಮಹಿಳಾ ಪ್ರಥಮದರ್ಜೆ ಕಾಲೇಜಿನ 520 ವಿದ್ಯಾರ್ಥಿಗಳ ಪೈಕಿ 308 ವಿದ್ಯಾರ್ಥಿಗಳು ಹಾಜರಾಗಿದ್ದರು.
ನಗರಸಭೆ ಸಹಕಾರದಿಂದ ಕಾಲೇಜಿನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಿ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಸೇರಿ ಕೋವಿಡ್-19 ಪರೀಕ್ಷೆೆ ಹಾಗೂ ಕೋವಿಡ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೊ.ಬಾಲಕೃಷ್ಣಯ್ಯ ತಿಳಿಸಿದರು.