

ಬೆಂಗಳೂರು ಗ್ರಾಮಾಂತರ: ಸರ್ಕಾರದ ಸುತ್ತೋಲೆಯಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲ ಖಾಸಗಿ ಹಾಗೂ ಸರ್ಕಾರಿ ಪ್ರೌಢಶಾಲೆಗಳು ಪುನರಾರಂಭಗೊಂಡಿದ್ದರೂ ಕೆಲವು ಖಾಸಗಿ ಕಾಲೇಜುಗಳು ಬಾಗಿಲು ತೆರೆಯಲು ಮೀನಮೇಷ ಎಣಿಸುತ್ತಿವೆ. ಮಕ್ಕಳ ಹಾಜರಾತಿ ಕಡ್ಡಾಯವಲ್ಲ ಎಂಬ ನಿಯಮವನ್ನೇ ಅಸವಾಗಿಸಿಕೊಂಡು ಪಾಲಕರೇ ಮಕ್ಕಳನ್ನು ಕಳುಹಿಸುತ್ತಿಲ್ಲವೆಂಬ ನೆಪವೊಡ್ಡಿ ಕಾಲೇಜು ತೆರೆಯುವ ದಿನವನ್ನು ಮುಂದೂಡುತ್ತಿರುವ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ 83 ಪಿಯು ಕಾಲೇಜುಗಳಿದ್ದು, 20ಕ್ಕೂ ಹೆಚ್ಚು ಕಾಲೇಜುಗಳು ಆರಂಭವಾಗಿಲ್ಲ. ಸೆಪ್ಟೆಂಬರ್ ಮೊದಲ ವಾರದ ಮೇಲೆ ಅರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದು, ಕರೊನಾ ಮೂರನೇ ಅಲೆಯ ಬಗ್ಗೆ ಕಾದುನೋಡಲು ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ನಿರ್ಧರಿಸಿವೆ ಎಂಬ ಮಾತು ಕೇಳಿಬರುತ್ತಿದೆ. 16 ಸರ್ಕಾರಿ ಕಾಲೇಜುಗಳಿದ್ದು, ಎಲ್ಲವೂ ಅರಂಭವಾಗಿದ್ದು, ಶೇ.80 ಹಾಜರಾತಿ ಕಂಡುಬರುತ್ತಿದೆ. 8 ಅನುದಾನಿತ ಕಾಲೇಜುಗಳು ಪುನಾರಂಭಗೊಂಡಿವೆ.
ಆಡ್ಮಿಷನ್ ಮುಗಿದಿದೆ, ಇನ್ನು ಚಿಂತೆಯಿಲ್ಲ: ಪ್ರಸಕ್ತ ಸಾಲಿನಲ್ಲಿ ಸರ್ಕಾರ ಎಸ್ಸೆಸ್ಸೆಲ್ಸಿ ಮಕ್ಕಳ ಸಾಮೂಹಿಕ ತೇರ್ಗಡೆ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪರೀಕ್ಷೆಗೆ ಮೊದಲೆ ಭಾಗಶಃ ಕಾಲೇಜುಗಳಲ್ಲಿ ಸೀಟು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚುರುಕುಗೊಳಿಸಲಾಗಿತ್ತು. ವಾರ್ಷಿಕ ಪರೀಕ್ಷೆ ನಡೆಯುವುದೋ ಇಲ್ಲವೋ, ಸರ್ಕಾರ ಯಾವ ಮಾನದಂಡ ರೂಪಿಸುತ್ತದೋ, ಮಕ್ಕಳ ಕಾಲೇಜು ಭವಿಷ್ಯ ಹೇಗೋ ಎಂಬ ಧಾವಂತಕ್ಕೆ ಬಿದ್ದ ಪಾಲಕರು ತರಾತುರಿಯಲ್ಲೇ ಮಕ್ಕಳನ್ನು ಕಾಲೇಜುಗಳಿಗೆ ಅಡ್ಮಿಷನ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕಾಲೇಜು ಆಡಳಿತ ಮಂಡಳಿಗೆ ಕಾಲೇಜು ಶುಲ್ಕದ ತಲೆನೋವು ಇಲ್ಲದಂತಾಗಿದೆ. ಆದ್ದರಿಂದ ಕಾಲೇಜನ್ನು ಯಾವಾಗ ಬೇಕಾದರೂ ಆರಂಭಿಸಬಹುದು, ತುರ್ತು ಏನಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಆರ್ಥಿಕ ಚೇತರಿಕೆಗೆ ಉಪಾಯ: ಆನ್‌ಲೈನ್ ತರಗತಿ ನಡೆಸುತ್ತಿರುವ ಶಿಕ್ಷಕರಿಗೆ ಅರ್ಧ ವೇತನ ನೀಡಲಾಗುತ್ತಿದೆ, ಕಾಲೇಜಿನಲ್ಲಿ ವಿದ್ಯುತ್, ನೀರಿನ ಬಿಲ್ ಉಳಿತಾಯವಾಗುತ್ತಿದೆ, ಡಿ ಗ್ರೂಪ್ ನೌಕರರಿಗೆ ಗೇಟ್‌ಪಾಸ್ ನೀಡಲಾಗಿದೆ. ಈ ಮೂಲಕ ಆರ್ಥಿಕ ಚೇತರಿಗೆ ಕಾಣುತ್ತಿವೆ. ತಕ್ಷಣಕ್ಕೆ ಕಾಲೇಜು ಆರಂಭಿಸಿದರೆ ಶಿಕ್ಷಕರಿಗೆ ಪೂರ್ಣ ಸಂಬಳ ಕೊಡಬೇಕು, ಮತ್ತೆ ಡಿ ಗ್ರೂಪ್‌ನೌಕರರನ್ನು ಸೇರಿಸಿಕೊಳ್ಳಬೇಕು, ಪ್ರತಿದಿನ ಕಾಲೇಜಿಗೆ ಸ್ಯಾನಿಟೈಸೇಷನ್ ಮಾಡಬೇಕು, ಭೌತಿಕ ತರಗತಿ ಜತೆಗೆ ಕಾಲೇಜಿಗೆ ಬಾರದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಬೇಕು, ಇದೆಲ್ಲ ಹೊರೆ ತಪ್ಪಿಸಿಕೊಳ್ಳಲು ಕಾದುನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 82 ಪದವಿಪೂರ್ವ ಕಾಲೇಜುಗಳಿದ್ದು, ಎಲ್ಲ ಕಾಲೇಜುಗಳು ಪುನರಾರಂಭಗೊಂಡಿವೆ ಎಂಬ ಮಾಹಿತಿ ಇದೆ, ಒಂದು ವೇಳೆ ಯಾವುದೇ ಕಾಲೇಜು ಅಡಳಿತ ಮಂಡಳಿ ಕಾಲೇಜು ತೆರೆಯದಿದ್ದರೆ ಅಥವಾ ದಿನ ಮುಂದೂಡಿರುವುದು ಕಂಡುಬಂದರೆ ಅಂಥ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪ್ರಸ್ತುತ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಉತ್ತಮವಾಗಿದ್ದು, ಪಾಲಕರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಬಾಲಾಜಿ, ಡಿಡಿಪಿಯು ಬೆಂ.ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿನ ಎಲ್ಲ ಕಾಲೇಜುಗಳು ಆರಂಭವಾಗಿವೆ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ನಿರೀಕ್ಷೆಗೂ ಹೆಚ್ಚಿದೆ, ಸರ್ಕಾರದ ಸುತ್ತೋಲೆಯಂತೆ ಕಾಲೇಜಿನಲ್ಲಿ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ, ಪಾಲಕರಿಂದ ಒಪ್ಪಿಗೆ ಪತ್ರ ಪಡೆದೆ ಮಕ್ಕಳಿಗೆ ಅವಕಾಶ ನೀಡಲಾಗಿದೆ. ವೇಣುಗೋಪಾಲ್ ಪ್ರಾಂಶುಪಾಲ, ಶ್ರೀವಾಣಿ ಪಿಯು ಕಾಲೇಜ್ ದೊಡ್ಡಬಳ್ಳಾಪುರ