ಕಾಲೇಜು ಅಧ್ಯಾಪಕರಿಂದ ಮೌಲ್ಯಮಾಪನ ಬಹಿಷ್ಕಾರ

3Jaggu4-A
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ ವಿವಿ ಕಾಲೇಜು ಅಧ್ಯಾಪಕರ ಸಂಘದಿಂದ ಕುಲಸಚಿವರಿಗೆ ನ. 22ರಂದು ಮನವಿ ಸಲ್ಲಿಸಲಾಗಿತ್ತು.
Published on

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಅಧ್ಯಾಪಕರು ಪದವಿ ಪರೀಕ್ಷೆಗಳ ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಧ್ಯಾಪಕರ ಸಂಘದಿಂದ ರಾಣಿ ಚನ್ನಮ್ಮ ವಿವಿ ಮೌಲ್ಯಮಾಪನ ಕುಲಸಚಿವರ ಸಮ್ಮುಖದಲ್ಲಿ ಚರ್ಚಿಸಿ ಒಂದು ವಾರ ಗಡುವು ನೀಡಲಾಗಿತ್ತು. ಗಡುವು ಮೀರಿದ್ದರಿಂದ ಅಧ್ಯಾಪಕರು ನ.4ರಿಂದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಮಾಡುವುದನ್ನು ಬಹಿಷ್ಕಾರ ಮಾಡಿದ್ದಾರೆ.

ವಿವಿ ವ್ಯಾಪ್ತಿಯ ಕಾಲೇಜು ಅಧ್ಯಾಪಕರು ಪದವಿ ಪರೀಕ್ಷೆಗಳ ಮೌಲ್ಯಮಾಪಕರು, ಮೇಲ್ವಿಚಾರಕರು, ಬಾಹ್ಯ ಪರೀಕ್ಷಕರು, ಆಂತರಿಕ ಪರಿವೀಕ್ಷಕರು, ಪರೀಕ್ಷಾ ಕೊಠಡಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿ 2 ವರ್ಷಕ್ಕೊಮ್ಮೆ ಎಲ್ಲ ಪರೀಕ್ಷಾ ಕರ್ತವ್ಯಗಳ ಸಂಭಾವನೆಯ ಶೇ. 10 ರೂ. ಹೆಚ್ಚಿಸಬೇಕೆಂಬ ನಿಯಮವನ್ನು ವಿಶ್ವವಿದ್ಯಾಲಯ ಪಾಲಿಸದ ಕಾರಣ ಅಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ. 2018ರಲ್ಲಿ ವಿವಿ ಕುಲಪತಿ ಎಸ್.ಬಿ. ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಪ್ರತಿ 2 ವರ್ಷಕ್ಕೊಮ್ಮೆ ಪರೀಕ್ಷಾ ಕಾರ್ಯಗಳ ಸಂಭಾವನೆಯನ್ನು ಶೇ.10ರಷ್ಟು ಹೆಚ್ಚಿಸಬೇಕು ಎಂದು ವರದಿ ನೀಡಿದೆ. ಆದರೆ, 5 ವರ್ಷಗಳು ಕಳೆದರೂ ಇದು ಸಾಕಾರಗೊಂಡಿಲ್ಲ. ಜತೆಗೆ ಮೌಲ್ಯಮಾಪನ ಕಾರ್ಯಕ್ಕೆ ಒಂದು ಪೇಪರ್‌ಗೆ 15 ರೂ.ನಿಂದ 20 ರೂ.ಗೆ ಏರಿಕೆ ಮಾಡಬೇಕು, ಪ್ರತಿದಿನಕ್ಕೆ ಭತ್ಯೆ 1,200 ರೂ.ನಿಂದ 1,500ರೂ. ಗೆ ಏರಿಸುವ ಕುರಿತಂತೆ ವಿಶ್ವವಿದ್ಯಾಲಯ ಸ್ಪಂದಿಸದ ಕಾರಣ ಅಧ್ಯಾಪಕರು ಹೋರಾಟಕ್ಕಿಳಿದಿದ್ದಾರೆ.

ಅಕ್ಟೋಬರ್ 11ರಿಂದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ನಡೆದಿವೆ. ಈ ಕಾರ್ಯ ಮಾಡುತ್ತಲೇ ಅಧ್ಯಾಪಕರು ಬೇಡಿಕೆ ಈಡೇರಿಸುವಂತೆ ಅ. 22ರಂದು ಕುಲಸಚಿವರಿಗೆ ಮನವಿ ಸಲ್ಲಿಸಿದ್ದರು. ಬೇಡಿಕೆಗೆ ಪ್ರತಿಕ್ರಿಯಿಸಿದ್ದ ವಿವಿ ಕುಲಸಚಿವರು, ನ. 2ರಂದು ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ನವೆಂಬರ್ 2ರವರೆಗೆ ಮೌಲ್ಯಮಾಪನ ಕಾರ್ಯ ಮಾಡಿ, ಗಡುವು ಮುಗಿದಿದ್ದರಿಂದ ಮೌಲ್ಯಮಾಪನದಿಂದ ದೂರು ಉಳಿಯುತ್ತಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸುತ್ತೇವೆ. ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯಲ್ಲಿ 1 ಸಾವಿರಕ್ಕೂ ಹೆಚ್ಚು ಅಧ್ಯಾಪಕರಿದ್ದಾರೆ. ಬೇಡಿಕೆ ಈಡೇರುವವರೆಗೂ ಇವರೆಲ್ಲ ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯಲಿದ್ದಾರೆ. ವಿವಿ ಶೀಘ್ರದಲ್ಲೇ ಬೇಡಿಕೆ ಈಡೇರಿಸಲಿ.| ಮಲ್ಲಿಕಾರ್ಜುನ ಬಿರಾದಾರ ರಾಣಿ ಚನ್ನಮ್ಮ ವಿವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net