ಕಾಲೇಜಿನತ್ತ ಬೆರಳೆಣಿಕೆ ವಿದ್ಯಾರ್ಥಿಗಳು

Published on

ಮಂಗಳೂರು: ದ.ಕ ಜಿಲ್ಲೆಯಲ್ಲೂ ಆರು ತಿಂಗಳ ಬಳಿಕ ಮಂಗಳವಾರ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ. ಸರ್ಕಾರದ ಸೂಚನೆಯಂತೆ ಕೋವಿಡ್‌ ಪರೀಕ್ಷೆ ಪ್ರಮಾಣ ಪತ್ರ ಇರುವವರಿಗೆ ಮಾತ್ರ ಕಾಲೇಜುಗಳ ಒಳಗೆ ಬಿಡಲಾಗಿದೆ. ಕಾಲೇಜಿನ ಪ್ರವೇಶ ದ್ವಾರದಲ್ಲೇ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್‌ ಪ್ರಮಾಣಪತ್ರವನ್ನು ಪಡೆದು, ಅಲ್ಲಿಂದ ನೇರ ತರಗತಿಗೆ ಕಳುಹಿಸಲಾಗುತ್ತಿದೆ. ಕಾಲೇಜು ಆವರಣದಲ್ಲಿ ಎಲ್ಲೆಂದರಲ್ಲಿ ತಿರುಗಾಡಲು ಅವಕಾಶವಿಲ್ಲ. ಪ್ರಮಾಣ ಪತ್ರ ಇಲ್ಲದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.

ಕೋವಿಡ್‌‌ ಟೆಸ್ಟ್‌ ಮಾಡಿಸಿದ್ದರೂ, ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿಲ್ಲ. ಮೊದಲ ದಿನ ಶೇ.20-25ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಕೆಲವೊಂದು ಖಾಸಗಿ ಹಾಗೂ ಸ್ವಾಯತ್ತ ಕಾಲೇಜುಗಳು ಮಂಗಳವಾರ ಆರಂಭವಾಗಿಲ್ಲ. ವಿದ್ಯಾರ್ಥಿಗಳಿಗೆ ಮೊದಲೇ ಸೂಚನೆ ನೀಡಿದ್ದರಿಂದ ಅಂತಹ ಕಾಲೇಜುಗಳ ಆವರಣ ಎಂದಿನಂತೆ ಬಿಕೋ ಅನ್ನುತಿತ್ತು. ಆನ್‌ಲೈನ್‌ ಕ್ಲಾಸ್‌ನಲ್ಲಿ ಏನು ಅರ್ಥವಾಗುತ್ತಿರಲಿಲ್ಲ, ಕಾಲೇಜು ಆರಂಭವಾಗಿರುವುದರಿಂದ ಇನ್ನು ಕಲಿಕೆ ಸುಲಭವಾಗಲಿದೆ ಎನ್ನುವ ಅಭಿಪ್ರಾಯ ಕೆಲವು ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net