

ಕೆ.ಎಂ.ದೊಡ್ಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ವಹಿಸುತ್ತೇನೆ ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಮಣಿಗೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ-ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಣಿಗೆರೆ ಕುಗ್ರಾಮದಲ್ಲಿ ಉತ್ತಮ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು ಇಲ್ಲಿ ಹಲವು ಮೂಲಸೌಕರ್ಯಗಳು ಕೊರತೆ ಕಾಡುತಿತ್ತು. ಅದನ್ನು ಬಗೆಹರಿಸಿ ಶುದ್ಧ ಕುಡಿಯುವ ನೀರು ಮತ್ತು ಕಾಂಪೌಂಡ್ ನಿರ್ಮಿಸಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕಾಲೇಜುಗಳಲ್ಲಿ ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗಳಿಗೂ ನೀಡುವುದರಿಂದ ವಿದ್ಯಾರ್ಥಿಗಳು ಇನ್ನಷ್ಟು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಲು ಸಾದ್ಯವಾಗುತ್ತದೆ. ಕ್ರೀಡೆಯನ್ನು ಕೇವಲ ಬಹುಮಾನಕ್ಕಾಗಿ ಆಡುವುದು ಬೇಡ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯಕತೆ ಇದೆ ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗುತಿದ್ದು ಅವುಗಳಿಗೆ ಕಡಿವಾಣ ಹಾಕಬೇಕು. ಮೋಜು-ಮಸ್ತಿಗಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೆ ಶೈಕ್ಷಣಿಕ ಪ್ರಗತಿಯಲ್ಲಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಣಿಗೆರೆ ಗ್ರಾಮದಲ್ಲಿ ಕೋರಿಕೆ ಮೇರೆಗೆ ಸಾರಿಗೆ ಬಸ್ ನಿಲುಗಡೆಯ ಬಗ್ಗೆ ಪ್ರಾಂಶುಪಾಲರು ನನ್ನ ಗಮನಕ್ಕೆ ತಂದಿದ್ದು ಈ ಬಗ್ಗೆ ಸಾರಿಗೆ ಸಚಿವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳು ಶಾಸಕ ಕದಲೂರು ಉದಯ್ ಅವರನ್ನು ಅಭಿನಂಧಿಸಿದರು. ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹರಟೆ ಖ್ಯಾತಿಯ ಮೈಸೂರು ಆನಂದ್, ಪ್ರಾಧ್ಯಾಪಕ ಪ್ರೊ.ತೈಲೂರು ಅಣ್ಣಯ್ಯ ಸೇರಿದಂತೆ ಮತ್ತಿತರರು ಇದ್ದರು.
ಸ್ವಯಂ ಸೇವಕರ ನೇಮಕ
ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ನೀಡಿರುವ ಗ್ಯಾರಂಟಿಗಳಂತೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದ್ದು, ಕ್ಷೇತ್ರದಲ್ಲಿ ಇಬ್ಬರು ಸ್ವಯಂ ಸೇವಕರನ್ನು ನೇಮಿಸಿ ಯೋಜನೆ ಯಶಸ್ವಿಗೆ ಶ್ರಮಿಸಲಾಗುವುದು ಎಂದು ಶಸಕ ಕದಲೂರು ಉದಯ್ ಹೇಳಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿ ಮನೆಯ ಯಾಜಮಾನಿ ಖಾತೆಗೆ 2 ಸಾವಿರ ರೂ. ಜಮಾ ಆಗಲಿದೆ. ಮನೆಯ ಯಜಮಾನಿ ಗೃಹ ಖರ್ಚಿಗಾಗಿ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ತಂದಿದ್ದು, ಈಗಾಗಲೇ ಇದರ ಕಾರ್ಯ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಕಾರ್ಯ ನಡೆಯುತಿದ್ದು ಪ್ರತಿ ಬೂತ್ ಮಟ್ಟದಲ್ಲೂ ಇಬ್ಬರು ಸ್ವಯಂ ಸೇವಕರನ್ನು ನೇಮಿಸಿ ಮದ್ದೂರು ಕ್ಷೇತ್ರದಲ್ಲಿ ಯೋಜನೆ ಸಮರ್ಪಕ ಜಾರಿಗೆ ಕ್ರಮವಹಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನೀಡಿರುವ ಗ್ಯಾರಂಟಿಗಳನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು ಅರ್ಹರಿಗೆ ಎಲ್ಲ ಯೋಜನೆಗಳು ಸಿಗಲಿವೆ. ಯಾವುದೇ ಅಪಪ್ರಚಾರಕ್ಕೆ ಕಿವಿ ಗೋಡಬೇಡಿ ಎಂದರು.
ಜಿ.ಪಂ.ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಂಡರಾದ ಕದಲೂರು ತಿಮ್ಮೇಗೌಡ, ಕದಲೂರು ರವಿ, ಹರೀಶ್ ಯರಗನಹಳ್ಳಿ, ಶಿವು ಸೇರಿದಂತೆ ಹಲವರಿದ್ದರು.