

ಹಾಸನ: ಪೋಷಕರು ಕಷ್ಟಪಟ್ಟು ಕಾಲೇಜಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ತೊಡಗಿಕೊಳ್ಳಬೇಕೇ ವಿನಃ ದಾರಿತಪ್ಪಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡ್ಯಾಪ್ಕ್ಯೊ ವಿಭಾಗದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಬಲ್ಲೇನಹಳ್ಳಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನಲ್ಲಿ ಶುಕ್ರವಾರ ರೆಡ್ ರಿಬ್ಬನ್ ಘಟಕದ ವತಿಯಿಂದ ಎಚ್.ಐ.ವಿ. (ಏಡ್ಸ್ )ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯುವ ಜನತೆ ಸರಿಯಾದ ದಾರಿಯಲ್ಲಿ ನಡೆದರೆ ಗುರಿ ಮುಟ್ಟಬಹುದು. ಆಧುನಿಕತೆಯ ನಾಗಾಲೋಟದಿಂದಾಗಿ ಸಾಮಾಜಿಕ ನಿಯಮಗಳನ್ನು ಮೀರುತ್ತಾ ಇದ್ದೇವೆ. ಸ್ವೇಚ್ಛಾಚಾರದ ಜೀವನವನ್ನು ಅನುಭವಿಸುವಂತಾಗಿದೆ. ಹೆಚ್‌ಐವಿ ಸೊಂಕಿತರಿಗೆ ಆತ್ಮಸ್ಥೈರ್ಯ ತುಂಬುದವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್ ಮಾತನಾಡಿ, ಜ್ಞಾನ ನಮ್ಮನ್ನು ಉತ್ತುಂಗಕ್ಕೆ ಕರೆದುಕೊಂಡುಹೋಗುತ್ತದೆ. ಸಾಂಕ್ರಾಮಿಕ ರೋಗ ಅತ್ಯಂತ ಸಲಭವಾಗಿ ಹರಡುತ್ತದೆ. ರೋಗದ ಬಗ್ಗೆ ಗಂಭೀರವಾಗಿ ನೋಡಿಕೊಳ್ಳಬೇಕಾಗುತ್ತದೆ. ವಾಸ್ತವವಾಗಿ ಜೀವನದಲ್ಲಿ ಏನು ಇಲ್ಲ, ಜೀವನ ಒಂದು ಸಂಘರ್ಷ ಎಂದರಲ್ಲದೇ, ನಾವು ಬದುಕಿನ ನಡುವೆ ನಿರಂತರವಾಗಿ ಜೀವನ ಏನೆಂಬುದು ತಿಳಿಯುತ್ತದೆ. ಆಧ್ಯಾತ್ಮಿಕ ಚಿಂತನೆಯ ಮೂಲಕ ಜಾಗೃತಿ ಮೂಡಿಸಬೇಕು ಎಂದು ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು, ಜ್ಞಾನ ಮತ್ತು ತಳಿವಳಿಕೆ ಎಲ್ಲರಿಗೂ ತಲುಪಬೇಕು ಎಂಬುದು ಎಲ್ಲಾ ಘಟಕಗಳ ಮುಖ್ಯ ಉದ್ದೇಶವಾಗಿರುತ್ತದೆ. ನಮ್ಮ ತಪ್ಪಿನ ಅರಿವು ನಮಗೆ ಇರುವುದಿಲ್ಲ. ತಪ್ಪು ಮಾಡುವವರೆಗೂ ತಪ್ಪಿನ ಅರಿವು ನಮಗಿರುವುದಿಲ್ಲ. ಆಕರ್ಷಣೆಗೆ ಇಂದಿನ ಯುವಪೀಳಿಗೆ ಮಾರು ಹೋಗುತ್ತಿದ್ದಾರೆ. ಹಳೆ ತಲೆಮಾರಿನವರು 100 ವರ್ಷಗಳ ಕಾಲ ಬದುಕುತ್ತಿದ್ದರೆ ಆದರೆ ಇಂದು ಇನ್ನೂ ಪ್ರಾಯ ಇರುವಾಗಲೇ ದುರಂತಕ್ಕೆ ಹೋಗಿ ತಮ್ಮ ಆಯಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಯನ್ನು ರೆಡ್ ರಿಬ್ಬನ್ ಘಟಕದ ಸಂಚಾಲಕಿ ಪ್ರಮೀಳಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಏಡ್ಸ್ ನಿಯಂತ್ರಿಸುವಲ್ಲಿ ಯುವಜನತೆಯ ಪಾತ್ರ ಕುರಿತು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ಪ್ರಥಮ , ಭೂಮಿಕಾ ದ್ವಿತೀಯ, ಧನಂಜಯ್ ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಇತಿಹಾಸ ವಿಭಾಗದ ಪ್ರಾಧ್ಯಾಪಕ ಗೋಪಾಲ್, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಚಂದ್ರಕಲಾ, ಪತ್ರಿಕೋದ್ಯಮ ವಿಭಾಗದ ರಶ್ಮಿ ಎ.ವಿ., ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಜ್ಯೋತಿ, ದೈಹಿಕ ಶಿಕ್ಷಣ ನಿರ್ದೇಶಕ ಪವನ್ ಇತರರು ಇದ್ದರು.