

ದೀಪಕ್ ಸಾಗರ್, ಸಾಗರ
ಕಾಲುಸಂಕಗಳ ಮೇಲೆ ಓಡಾಡುವುದೆಂದರೆ ಸಾಹಸವೇ ಸರಿ. ಹಲವು ದಶಕಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳ ಹಿನ್ನೀರಿನ ನಡುವೆ ವಾಸಿಸುವ ಜನರು ಜೀವದ ಹಂಗು ತೊರೆದು ಇಂತಹ ಕಾಲುಸಂಕಗಳನ್ನೇ ಅವಲಂಬಿಸಿದ್ದರು. ಆದರೆ ಇದೀಗ ಇಂತಹ ಕಾಲುಸಂಕಗಳಿಗೆ ಮುಕ್ತಿ ಸಿಗುವ ಸೂಚನೆ ದೊರೆತಿದೆ.
ಗ್ರಾಮೀಣ ಜನತೆ ತಮ್ಮ ಊರಿಗೆ ಬಂದ ಮಂತ್ರಿಗಳು, ಶಾಸಕರು ಎಲ್ಲರಿಗೂ ಮನವಿ ಸಲ್ಲಿಸಿ ಕಾಲುಸಂಕಗಳ ಸಮಸ್ಯೆಗೆ ಪರಿಹಾ ರಕಲ್ಪಿಸಿ ಎಂದು ಮನವಿ ಮಾಡುತ್ತಿದ್ದರು. ಗ್ರಾಮ ಸಭೆಗಳಲ್ಲಿ ಈ ವಿಚಾರಗಳು ಚರ್ಚೆಗೆ ಬಂದರೂ ನಂತರ ಯಾವುದೇ ಪ್ರಯತ್ನಗಳು ಫಲಕೊಡುತ್ತಿರಲಿಲ್ಲ.
ಇತ್ತೀಚಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸುಸಜ್ಜಿತ ಕಾಲುಸಂಕ, ತಡೆಗೋಡೆ ಸೇರಿ ಕಿರುಸೇತುವೆಗಳ ನಿರ್ಮಾಣಕ್ಕೆ 50 ಕೋಟಿ ರೂ. ನೀಡುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಮನವಿ ಮಾಡಿದ್ದು, ಇದಕ್ಕೆ ಮಂಜೂರಾತಿಯೂ ದೊರೆತಿದೆ. ತಾಲೂಕಿನ 234 ಕಡೆಗಳಲ್ಲಿ ಹಾಗೂ ಹೊಸನಗರ ತಾಲೂಕಿನ ಕಾಲುಸಂಕ, ಕಿರುಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಳಕೆಯಾಗಲಿದೆ. ಪಶ್ಚಿಮಘಟ್ಟದ ಶ್ರೇಣಿಯಲ್ಲಿರುವ ಕಾಲುಸಂಕಗಳಿಗೆ ಇಷ್ಟು ಪ್ರಮಾಣದ ಹಣ ಮಂಜೂರಾಗಿರುವುದು ಇದೇ ಮೊದಲು. ಸಂಬಂಸಿದ ಇಲಾಖೆ ಅಕಾರಿಗಳು ಈಗಾಗಲೇ ಕಾಲುಸಂಕ ನಿರ್ಮಿಸುವ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ಕಾಲುಸಂಕದ ಕಥೆ
ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದವು. ಪಶ್ಚಿಮ ಘಟ್ಟದ ಶ್ರೇಣಿಯ ದುರ್ಗಮ ಹಾದಿಗಳಲ್ಲಿ ಸಣ್ಣ ಹಳ್ಳ, ಕೆರೆ, ಒಂದೂರಿನಿಂದ ಮತ್ತೊಂದು ಊರಿಗೆ ಸಂಪರ್ಕ ಸೇತುವೆಯಾಗಿ ಜನರೇ ನಿರ್ಮಿಸಿಕೊಂಡ ಅಡಕೆ ದಬ್ಬೆ, ಕಟ್ಟಿಗೆಗಳ ಸೇತುವೆಗಳು ಜನರ ಓಡಾಟಕ್ಕೆ ಆಸರೆಯಾಗಿದ್ದವು. ಮಳೆಗಾಲದಲ್ಲಿ ಮಕ್ಕಳು ಛತ್ರಿ ಹಿಡಿದು ಇಂತಹ ಅಪಾಯಕಾರಿ ಸಂಕಗಳ ಮೇಲೆ ನಡೆಯಬೇಕಿತ್ತು. ಕರೂರು ಮತ್ತು ಬಾರಂಗಿ ಹೋಬಳಿಗಳಲ್ಲಿ ಇಂತಹ ಸಮಸ್ಯೆ ಅನುಭವಿಸುತ್ತಿರುವ ಅನೇಕ ಹಳ್ಳಿಗಳಿವೆ.
ಸೌಕರ್ಯ ಕಾಣದ ಹಳ್ಳಿಗಳು
ಶರಾವತಿಯ ದಟ್ಟ ಕಾನನದಲ್ಲಿರುವ ಬಾರಂಗಿ ಹೋಬಳಿಯ ಉರಳುಗಲ್, ಮಜರೆ ಗ್ರಾಮಗಳಾದ ಸಾಲಕೋಡು, ಸೀಕನಹಳ್ಳಿ, ಹೆಬ್ಬನಕೇರಿ, ಮುಂಡುವಾಳ, ಮೇಲಿನೂರು, ಇದಕ್ಕೆ ತಾಗಿಕೊಂಡಿರುವ ಕಾನೂರು ಕಲಗಲ್ಲಿ ಗ್ರಾಮಗಳಿಗೆ ಇಂದಿಗೂ ವಿದ್ಯುತ್ ಸೌಲಭ್ಯವಿಲ್ಲ. ಜನಸಂಪರ್ಕ ಸಭೆಯಲ್ಲಷ್ಟೇ ಅಲ್ಲ, ಜಿಲ್ಲಾಕಾರಿಯೇ ಇಲ್ಲಿಗೆ ಭೇಟಿ ನೀಡಿ ನಡೆಸಿದ ಸಭೆಗಳಲ್ಲಿ ಸೌಕರ್ಯಕ್ಕಾಗಿ ಸಲ್ಲಿಸಿದ ಮನವಿಗಳಿಗೆ ಲೆಕ್ಕವೇ ಇಲ್ಲ. ಸುಮಾರು 300ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಪ್ರದೇಶಗಳು ಮೊಂಬತ್ತಿಯಲ್ಲೇ ಕಾಲ ಕಳೆಯಬೇಕು. ರಾತ್ರಿಗೆ ಕಾಲುಸಂಕಗಳನ್ನು ಕಂದಿಲು ಬೆಳಕಿನಲ್ಲಿಯೇ ದಾಟಬೇಕು.
ಪಿಡಬ್ಲುಡಿಯಿಂದ ಸಂಕಕ್ಕೆ ಆದ್ಯತೆ
ಲೋಕೋಪಯೋಗಿ ಇಲಾಖೆ ಕಳೆದ ಜೂ.11ರಂದು ಕಾಲುಸಂಕ ಕಾಮಗಾರಿಗಳಿಗಾಗಿ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಒಟ್ಟು 18 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಹೊಸನಗರ ಮತ್ತು ಸಾಗರ ತಾಲೂಕಿಗೆ 1 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿಯೂ ಸಾಗರ ತಾಲೂಕಿನಲ್ಲಿ ತುರ್ತಿರುವ ಕಡೆ ಕಾಲುಸಂಕಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಬಾನಕುಳಿ ಗ್ರಾಪಂನ ಹೆಬ್ಬನಕೇರಿ ಕಾಲುಸಂಕ ನಿರ್ಮಾಣಕ್ಕೆ ಹಣ ತೆಗೆದಿರಿಸಿದೆ.
ಸಾಲಕೋಡು ಗ್ರಾಮಕ್ಕೂ ಬೇಕು
ಕಾಮಗಾರಿಗಳ ಪಟ್ಟಿಯಲ್ಲಿ ಬಾನಕುಳಿ ಗ್ರಾಪಂನ ಸಾಲಕೋಡು ಗ್ರಾಮದ ಮನೆಗಳನ್ನು ಸಂಪರ್ಕಿಸುವ ಕಾಲುಸಂಕ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಈವರೆಗೂ ನಮ್ಮ ಬೇಡಿಕೆಗೆ ಆದ್ಯತೆ ನೀಡಿಲ್ಲ ಎಂಬುದು ಗ್ರಾಮಸ್ಥರ ದೂರು. ಸರ್ಕಾರ ದೊಡ್ಡ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯ ಮಾತುಗಳನ್ನು ಆಡುತ್ತಲೇ ಇರುತ್ತದೆ. ಆದರೆ ಸಣ್ಣ ಗ್ರಾಮಗಳ ಸಮಸ್ಯೆ ಕೇಳುವರ‌್ಯಾರು ಎಂಬುದು ಜನರ ಪ್ರಶ್ನೆ.
ಸಾಗರ ಕ್ಷೇತ್ರದ ಸಾಕಷ್ಟು ಕಡೆಗಳಲ್ಲಿ ಜನ ಕಾಲುಸಂಕಗಳನ್ನೇ ಆಶ್ರಯಿಸಿದ್ದಾರೆ. ಶಾಲೆಯ ಮಕ್ಕಳು, ತಾಯಂದಿರು, ವೃದ್ಧರು ಓಡಾಡುವುದು ಕಷ್ಟಸಾಧ್ಯ. ಇದನ್ನು ಉಪಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಯಿತು. ಸಮಸ್ಯೆ ಆಲಿಸಿದ ಅವರು ಸಾಗರ, ಹೊಸನಗರ ತಾಲೂಕಿನ ವಿವಿಧ ಗ್ರಾಮಗಳ ಕಾಲುಸಂಕ, ತಡೆಗೋಡೆ, ಕಿರುಸೇತುವೆ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ.
ಗೋಪಾಲಕೃಷ್ಣ ಬೇಳೂರು
ಕರೂರು ಮತ್ತು ಬಾರಂಗಿ ಹೋಬಳಿಯಲ್ಲಿ ಹೆಚ್ಚು ಕಿರುಸೇತುವೆಗಳು ನಿರ್ಮಾಣವಾಗಬೇಕು. ಇದೇ ಮೊದಲ ಬಾರಿಗೆ ಸರ್ಕಾರ ಮಲೆನಾಡು ಭಾಗದ ಸಂಕ ನಿರ್ಮಾಣಕ್ಕೆ ದೊಡ್ಡ ಮಟ್ಟದ ಅನುದಾನ ಬಿಡುಗಡೆ ಮಾಡಿದೆ. 234 ಕಡೆಗಳಲ್ಲಿ ಹಳ್ಳಗಳಿಗೆ ಕಾಲುಸಂಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದು ಸ್ವಾಗತಾರ್ಹ. ಕೆಲವು ಪ್ರಮುಖವಾದ ಪ್ರದೇಶಗಳಲ್ಲಿ ಕಾಲುಸಂಕ ನಿರ್ಮಾಣದ ಅಗತ್ಯತೆ ಇದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕು.
ನಾಗರಾಜ್ ಉರುಳಗಲ್