ಕಾಲುವೆ ಕ್ಲೋಜರ್ ಕಾಮಗಾರಿಗೆ ಅನುದಾನ ಕೊಡಿ; ಅರವಿಂದ ಕುಲಕರ್ಣಿ

AKRS MANAVI CLOSER FUND (1)
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸದಾಶಿವ ಬರಟಗಿ, ಹೊನಕೇರೆಪ್ಪ ತೆಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳ ಕ್ಲೋಜರ್ ಕಾಮಗಾರಿಗಳನ್ನು ನಡೆಸಲು ರಾಜ್ಯ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕ್ಲೋಜರ್ ಕಾಮಗಾರಿ ನಡೆಸಲು (ಹೂಳು ಹಾಗೂ ಗಿಡಗಂಟಿಗಳ ತೆರವುಗೊಳಿಸುವ ಕಾರ್ಯ) ಅನುದಾನ ಇಲ್ಲದ ಕಾರಣ ಕಾಲುವೆಗಳಲ್ಲಿ ತುಂಬಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷವೂ ಕ್ಲೋಜರ್ ಕಾಮಗಾರಿ ನಡೆಸಲಿಲ್ಲ. ಇದರಿಂದ ಎಲ್ಲ ಕಾಲುವೆಗಳಲ್ಲಿ ಮಣ್ಣು ತುಂಬಿ ಗಿಡಗಂಟಿಗಳು ಬೆಳೆದಿವೆ. ಕಾಲುವೆಗಳಿಗೆ ನೀರು ಹರಿಸಿದ ಸಂದರ್ಭದಲ್ಲಿ ನೀರು ಮುಂದೆ ಸಾಗದೆ ಹೊಲಗಳಲ್ಲಿ ನುಗ್ಗಿ ಬೆಳೆ ಹಾಳಾಗಿ ಮಣ್ಣು ಕೂಡ ಕೊಚ್ಚಿ ಹೋಗುತ್ತಿದೆ. ಅಲ್ಲದೇ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪುವುದಿಲ್ಲ. ಇದರಿಂದ ಕೊನೆ ಅಂಚಿನಲ್ಲಿರುವ ರೈತರು ನೀರಿನಿಂದ ವಂಚಿತರಾಗುತ್ತಿದ್ದಾರೆ ಎಂದರು.

ಪ್ರತಿ ವರ್ಷವೂ ಕಾಲುವೆಗಳ ನಿರ್ವಹಣಾ ವೆಚ್ಚವನ್ನು ಕಡ್ಡಾಯವಾಗಿ ರಾಜ್ಯ ಸರ್ಕಾರ ಕೊಡಬೇಕು. ಆದರೆ ಸರ್ಕಾರವು ಈ ವರ್ಷ ಕೂಡ ಕ್ಲೋಜರ್ ಕಾಮಗಾರಿಗೆ ಹಣ ನೀಡದೆ ಆರ್ಥಿಕ ಮಿತವ್ಯಯದ ನೆಪ ಹೇಳುತ್ತಿದೆ. ಇದರಿಂದ ಕ್ಲೋಜರ್ ಕಾಮಗಾರಿ ನಡೆಯುವುದು ಅನುಮಾನವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾಲುವೆಗಳ ಕ್ಲೋಜರ್ ಕಾಮಗಾರಿ ನಡೆಸಲು ಅದಕ್ಕೆ ತಗಲುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸದಾಶಿವ ಬರಟಗಿ, ಹೊನಕೇರೆಪ್ಪ ತೆಲಗಿ, ಗುರಲಿಂಗಪ್ಪ ಪಡಸಲಗಿ, ಬಸವರಾಜ ಜಂಗಮಶೆಟ್ಟಿ, ಸಿಕಂದರ ಕರ್ಜಗಿ, ಸಂಪತ್‌ಕುಮಾರ ಕುಲಕರ್ಣಿ, ಸಂಜೀವ ಕುಲಕರ್ಣಿ, ಗುರುರಾಜ ಕುಲಕರ್ಣಿ, ದಾವಲಸಾಬ ನಧಾಪ್, ಗಿರಮಲ್ಲಪ್ಪ ದೊಡಮನಿ, ಚನಬಸಪ್ಪ ಸಿಂಧೂರ, ಪ್ರಹ್ಲಾದ ನಾಗರಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net