ಕಾಲುಬಾಯಿ ಲಸಿಕೆ ಶೇ.95 ಪ್ರಗತಿ, ನಿರಂತರ ಮಳೆ ನಡುವೆಯೂ ಸಿಬ್ಬಂದಿ ಶ್ರಮ ಡಿ.5ರೊಳಗೆ ಗುರಿ ಮುಟ್ಟುವತ್ತ ಇಲಾಖೆ ಕ್ರಮ

4f66c727-c4a9-49c7-aaff-f85c77637bd7
Published on

ಬೆಂಗಳೂರು ಗ್ರಾಮಾಂತರ: ರಾಸುಗಳನ್ನು ಕಾಡುವ ಕಾಲುಬಾಯಿ ರೋಗದಿಂದ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಕಾಲುಬಾಯಿ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಶೇ.95 ಪ್ರಗತಿ ಕಂಡಿದೆ. ನ.8ರಿಂದ ಆರಂಭವಾಗಿರುವ ಅಭಿಯಾನ ಬಮುಲ್ ಸಹಯೋಗದೊಂದಿಗೆ ಜಿಲ್ಲಾ ಪಶುಪಾಲನಾ ಇಲಾಖೆ ಜಿಲ್ಲೆಯಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಸಿದ್ದು, ಡಿ.5ರೊಳಗೆ ಶೇ.100 ಗುರಿಮುಟ್ಟುವ ವಿಶ್ವಾಸವಿದೆ. ಪ್ರಸ್ತುತ 53,832 ರಾಸುಗಳಿಗೆ ಲಸಿಕೆ ಹಾಕಿದ್ದು, ಇನ್ನೂ 3 ಸಾವಿರ ರಾಸುಗಳಿಗೆ ಲಸಿಕೆ ಹಾಕಬೇಕಿದೆ. ಪ್ರಸ್ತುತ 50,785 ಹಸುಗಳು ಹಾಗೂ 3,047 ಎಮ್ಮೆಗಳಿಗೆ ಲಸಿಕೆ ಹಾಕಲಾಗಿದೆ.

ರೈತರ ಆತಂಕ ದೂರ: ಕಳೆದೆರಡು ವರ್ಷದಿಂದ ರಾಸುಗಳ ಆರೋಗ್ಯ ರಕ್ಷಣಾ ಲಸಿಕೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿತ್ತು. ಹಲವು ರೈತರು ಖಾಸಗಿಯಾಗಿ ದುಬಾರಿ ಹಣ ತೆತ್ತು ಲಸಿಕೆ ಹಾಕಿಸಿದ್ದರು. ಮತ್ತೆ ಕೆಲವರು ನಾಟಿ ಔಷಧದ ಮೊರೆ ಹೋಗಿದ್ದರು. ಏತನ್ಮಧ್ಯೆ ಸರ್ಕಾರ ಲಸಿಕೆ ಪೂರೈಕೆ ಜತೆಗೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಅಭಿಯಾನ ಯಶಸ್ವಿಯಾಗಿದೆ.

ನಿರ್ದಿಷ್ಟ ಚಿಕಿತ್ಸೆ ಇಲ್ಲ: ದನ, ಎಮ್ಮೆ, ಹಂದಿ ಮತ್ತಿತರ ಜಾನುವಾರುಗಳಿಗೆ ಮಾರಣಾಂತಿಕ ವೈರಸ್‌ನಿಂದ ಕಾಲುಬಾಯಿ ಜ್ವರ ಸೋಂಕು ತಗಲುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ನಿಯಂತ್ರಣ ಕಷ್ಟಸಾಧ್ಯವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸುವುದೊಂದೆ ಪರಿಹಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರಕ ರೋಗ: ಸಾಮಾನ್ಯವಾಗಿ ರಾಸುಗಳಿಗೆ ತಗಲುವ ವೈರಾಣು ರೋಗವಾಗಿದ್ದು, ಸೀಳು ಗೋರಸುಳ್ಳ ದನ, ಎಮ್ಮೆ, ಹಂದಿ,ಕುರಿ ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆಯಂತ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಈ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಪರಿಹಾರ. ರೋಗದಿಂದ ಜಾನುವಾರು ಗುಣಮುಖವಾದರೂ ಭವಿಷ್ಯದಲ್ಲಿ ಗರ್ಭಾವಸ್ಥೆ ತಲುಪುವಲ್ಲಿ ವಿಳಂಬ, ದೈಹಿಕವಾಗಿ ಬಳಲುವಿಕೆ ಕಂಡುಬರುವ ಹಿನ್ನೆಲೆಯಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗುತ್ತದೆ. ಆದ್ದರಿಂದ ಪ್ರತಿ ಬಾರಿಯೂ ಲಸಿಕೆ ಹಾಕಿಸಬೇಕೆಂಬುದು ಅಧಿಕಾರಿಗಳ ಮನವಿ.

ಕಾಲುಬಾಯಿ ಲಕ್ಷಣಗಳೇನು?: ಪಿಕೋರ್ನಾ ವೈರಸ್‌ನಿಂದ ಕಾಲುಬಾಯಿ ಸೋಂಕು ತಗಲುತ್ತದೆ, ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದೆ, ಸೋಂಕು ತಗುಲಿದ ರಾಸುಗಳ ಗೊರಸು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ, ಬಾಯಿಯಲ್ಲಿ ಸಣ್ಣ ನೀರುಗುಳ್ಳೆಗಳಂತೆ ಕಾಣಿಸಿಕೊಂಡು ಬಳಿಕ ಅವು ಒಡೆದು ಜೊಲ್ಲು ಸೋರಲು ಆರಂಭವಾಗುತ್ತದೆ, ಗೊರಸು ಭಾಗದಲ್ಲಿ ಹುಣ್ಣು ತೀವ್ರಗೊಂಡು ರಾಸುಗಳು ನಡೆಯಲಾರದೆ ಪರಿತಪಿಸುತ್ತವೆ, ಸೂಕ್ತ ಚಿಕಿತ್ಸೆ ದೊರಕದಿದ್ದರೆ ರಾಸುಗಳು ಪ್ರಾಣ ಕಳೆದುಕೊಳ್ಳುತ್ತವೆ.

ಸರ್ಕಾರ ನಿಗದಿಪಡಿಸಿರುವ ಗುರಿಮುಟ್ಟಲು ಇಲಾಖೆ ಶ್ರಮಿಸುತ್ತಿದೆ, ಪ್ರಸ್ತುತ ಶೇ.95 ಪ್ರಗತಿ ಕಂಡಿದ್ದು, ಡಿ.5ರೊಳಗೆ ಶೇ.100 ಗುರಿ ಸಾಧಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆ ಲಸಿಕೆ ಹಾಕಿಸಲು ರೈತರು ಹಿಂದೇಟು ಹಾಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಹೈನುಗಾರರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಅಭಿಯಾನ ಯಶಸ್ಸಿನ ಹಾದಿಯಲ್ಲಿದೆ. ಡಾ.ಅನಿಲ್‌ಕುಮಾರ್ ಪಶುಪಾಲನಾ ಇಲಾಖೆ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net