

ಚಿತ್ರದುರ್ಗ: ಜಿಲ್ಲಾದ್ಯಂತ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಜಾನುವಾರುಗಳ ರಕ್ಷಣೆಗಾಗಿ ಹಮ್ಮಿಕೊಂಡಿರುವ 4ನೇ ಸುತ್ತಿನ ಕಾಲುಬಾಯಿ ರೋಗ ವಿರುದ್ಧದ ಉಚಿತ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು. ತಾಲೂಕಿನ ಮದಕರಿಪುರ ಗ್ರಾಪಂ ಕಚೇರಿ ಆವರಣ ಇದಕ್ಕೆ ಸಾಕ್ಷಿಯಾಯಿತು.
ಗ್ರಾಪಂ ಅಧ್ಯಕ್ಷ ಜಿ.ಓ.ಬಸವರಾಜ್ ಮಾತನಾಡಿ, ಇಲಾಖೆಯ ವೈದ್ಯರು, ಸಿಬ್ಬಂದಿ ರೈತರ ಮನೆ ಬಾಗಿಲಿನಲ್ಲೇ ಲಸಿಕೆ ಹಾಕುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಇಲಾಖೆ ಸಹಾಯಕ ನಿರ್ದೇಶಕಿ ಡಾ.ಇಂದಿರಾಬಾಯಿ ಮಾತನಾಡಿ, ಜಾನುವಾರುಗಳಿಗೆ ಈ ಹಿಂದೆ ಲಸಿಕೆ ಹಾಕಿಸಿದ್ದರೂ 3 ತಿಂಗಳ
ಮೇಲ್ಪಟ್ಟ, ಸಂಪೂರ್ಣ ಗರ್ಭಾವಸ್ಥೆಯಲ್ಲಿನ ರಾಸುಗಳನ್ನು ಹೊರತುಪಡಿಸಿ ಉಳಿದವುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ರೈತರು ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿ ತುರ್ತುಸೇವೆಯ ಪ್ರಯೋಜನ ಪಡೆಯಬಹುದು ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಸಂಜಯ್, ಇಲಾಖೆ ಪಶು ವೈದ್ಯಾಧಿಕಾರಿ ಡಾ.ಸ್ವಾಮಿ, ಪಶು ಪರಿವೀಕ್ಷಕರಾದ ಚಿದಾನಂದರೆಡ್ಡಿ, ಮಾರುತಿ, ಗ್ರಾಪಂ ಸದಸ್ಯ ನವೀನ್‌ಕುಮಾರ್, ರೈತರಾದ ರವಿ, ವೆಂಕಟೇಶ್, ನಟರಾಜ್, ನರಸಿಂಹ ಇತರರಿದ್ದರು.