ಕಾಲಕ್ಕೆ ತಕ್ಕಂತೆ ಬದಲಾಗಿ ವೃತ್ತಿ ಗೌರವ ಎತ್ತಿಹಿಡಿಯಿರಿ

5Ravig1
ಬೆಳಗಾವಿಯ ಸಾಯಿ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ರಾಜೇಶ ಧನವಾಡಕರ, ತಹಸೀಲ್ದಾರ್ ಆರ್.ಎಸ್.ಕುಲಕರ್ಣಿ, ಆರ್.ಸಿ.ಮುದಕನಗೌಡರ, ರಾಮು ಗುಗವಾಡ, ಎನ್.ಬಿ.ಮಠದ, ಮಲಗೌಡ ಪಾಟೀಲ, ಅನ್ವರ್ ಲಂಗೋಟಿ, ಆನಂದಗೌಡ ಕಾದ್ರೊಳ್ಳಿ, ವಿ.ಎಂ.ಮುಳ್ಳೂರ ಇದ್ದರು.
Published on

ಬೆಳಗಾವಿ: ಇಂದಿನ ದಿನಗಳಲ್ಲಿ ಶಿಕ್ಷಕರಿಗೆ ಸವಾಲೊಡ್ಡುವ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುವ ಮೂಲಕ ವೃತ್ತಿಗೌರವ ಎತ್ತಿ ಹಿಡಿಯಬೇಕಿದೆ ಎಂದು ಬೆಳಗಾವಿ ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ನಗರದಲ್ಲಿನ ಸಾಯಿ ಭವನದಲ್ಲಿ ಬೆಳಗಾವಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾದ ಬೆಳಗಾವಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಪವಿತ್ರವಾದದ್ದು, ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ಸಮಸ್ಯೆಗಳಿಗೆ ಉತ್ತರವಾಗಿ ಶಿಕ್ಷಕ ನಿಲ್ಲುತ್ತಾನೆ. ಪ್ರತಿಯೊಬ್ಬರ ಸಾಧನೆಯ ಬಹುದೊಡ್ಡ ಶಕ್ತಿಯೇ ಶಿಕ್ಷಕ. ಈ ನಿಟ್ಟಿನಲ್ಲಿ ಶಿಕ್ಷಕರ ಸೇವೆ ಅನನ್ಯವಾದದ್ದು ಎಂದರು.
ರಾಣಿ ಚನ್ನಮ್ಮ ವಿವಿ ಸಹ ಪ್ರಾಧ್ಯಾಪಕಿ ಡಾ.ಮೈತ್ರಿಯಿಣಿ ಗದಿಗೆಪ್ಪಗೌಡರ ಮಾತನಾಡಿ, ಶಿಕ್ಷಕರ ಬಗ್ಗೆ ಶ್ರದ್ಧೆ ಇದ್ದರೆ ಬೇಕಾದನ್ನು ಸಾಧಿಸಬಹುದು. ಆತ್ಮಾವಲೋಕನ ಮಾಡಿಕೊಂಡು ಪ್ರಸ್ತುತ ತಾಂತ್ರಿಕ ಸೌಲಭ್ಯ ಅರಿತು ಜ್ಞಾನ ಹೆಚ್ಚಿಸಲು ಶ್ರಮಿಸಬೇಕು ಎಂದರು.

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಜುಟ್ಟನವರ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಇನ್ನಿತರ ಇಲಾಖೆಗಳಿಂದ ಶಾಲೆಗಳಿಗೆ ಭೌತಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಲಾಗುತ್ತಿದೆ ಎಂದರು.
ಶಿಕ್ಷಕರು ಜವಾಬ್ದಾರಿ ಅರಿತು ಇಲಾಖೆ ನಿರ್ದೇಶನದಂತೆ ಶಾಲಾ ಸಮಯ ಪರಿಪಾಲಿಸುವ ಜತೆಗೆ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಗಮನ ಹರಿಸಬೇಕಿದೆ ಎಂದು ಹೇಳಿದರು.

ಸನ್ಮಾನ: ಈ ವರ್ಷ ನಿವೃತ್ತಿಯಾದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ 98 ಶಿಕ್ಷಕರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಕಿರಿಯ ಪ್ರಾಥಮಿಕ ವಿಭಾಗದಿಂದ ಪಂತನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಕುದ್ರೆಮನಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಡೋಲಿಯ ಸರ್ಕಾರಿ ಪ್ರೌಢಶಾಲೆ
ಕಡೋಲಿ ಶಾಲೆಗಳಿಗೆ ‘ಉತ್ತಮ ಶಾಲೆ ಪ್ರಶಸ್ತಿ ಮತ್ತು 33 ಶಿಕ್ಷಕರಿಗೆ ‘ಆದರ್ಶ ಶಿಕ್ಷಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2022ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ತಾಪಂ ಇಒ ರಾಜೇಶ ಧನವಾಡಕರ, ತಹಸೀಲ್ದಾರ್ ಆರ್.ಎಸ್.ಕುಲಕರ್ಣಿ, ಆರ್.ಸಿ.ಮುದಕನಗೌಡರ, ರಾಮು ಗುಗವಾಡ, ಎನ್.ಬಿ.ಮಠದ, ಮಲಗೌಡ ಪಾಟೀಲ, ಅನ್ವರ್ ಲಂಗೋಟಿ, ಆನಂದಗೌಡ ಕಾದ್ರೊಳ್ಳಿ, ವಿ.ಎಂ.ಮುಳ್ಳೂರ, ಶೇಖರ್ ಕರಂಬಳ್ಕರ್, ಪ್ರಕಾಶ ದೇಯನ್ನವರ, ಮೈಲಾರ ಹೊರಕೇರಿ, ಬಸವರಾಜ ಸುಣಗಾರ, ಐ.ಜಿ.ಗೂಳಪ್ಪನವರ, ಚಂದ್ರು ಕೋಲಕಾರ ಸೇರಿ ವಲಯದ ಶಿಕ್ಷಕರು ಇದ್ದರು. ಬಿಇಒ ಆರ್.ಪಿ. ಜುಟ್ಟನವರ ಸ್ವಾಗತಿಸಿದರು. ರಮೇಶ ಗೋಣಿ ಮತ್ತು ಪ್ರವೀಣ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net