ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

09 CRP-1A
Published on

ಚನ್ನರಾಯಪಟ್ಟಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೋಲ್ವೋ ಗ್ರೂಪ್ ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಹೃದಯ ಮತ್ತು ಕ್ಯಾನ್ಸರ್ ಸಂಬಂಧ ಪರೀಕ್ಷೆಗಳನ್ನು ಸಾರ್ವಜನಿಕರಿಗೆ ಮಾಡಿಕೊಡಲಾಯಿತು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸಂಚಾರಿ ಆರೋಗ್ಯ ಕೇಂದ್ರದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಸಂಚಾರಿ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಆತಂಕಕಾರಿ ಬೆಳವಣಿಗೆಗಳು ಸಂಭವಿಸುತ್ತಿದ್ದು ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಹಲವು ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತಿವೆ. ಹೃದಯಾಘಾತ ಸಂಭವಿಸಲು ಆಹಾರ ಪದ್ಧತಿಯ ಬದಲಾವಣೆ, ಬದಲಾದ ಜೀವನ ಶೈಲಿ, ಅನುವಂಶೀಯತೆ ಹೀಗೆ ಹತ್ತು ಹಲವು ಕಾರಣಗಳಿವೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಆರೋಗ್ಯ ಶಿಬಿರದಲ್ಲಿ ಎಕ್ಸ್‌ರೇ, ಇಸಿಜಿ, ಎಕೋ, ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿದಂತೆ ರಕ್ತ ಪರೀಕ್ಷೆಗಳನ್ನು ಸಾರ್ವಜನಿಕರಿಗೆ ಮಾಡಲಾಯಿತು.

ನಾರಾಯಣ ಹೆಲ್ತ್ ವ್ಯವಸ್ಥಾಪಕ ದೇವರಾಜ ನಾಯಕ್, ತಾಲೂಕು ಆರೋಗ್ಯ ಅಧಿಕಾರಿ ಎ.ಎನ್.ಕಿಶೋರ್ ಕುಮಾರ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎ.ಆರ್.ಅನಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಲಿಂಗಯ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮೋಹನ್ ಕಲ್ಕೆರೆ, ಬಾಲು ನಾಗಸಮುದ್ರ, ವೆಂಕಟೇಶ್, ವೋಲ್ವೋ ವ್ಯವಸ್ಥಾಪಕ ರಘು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net