ಕಾರ್ವಿುಕರಿಗೆ ಅಗತ್ಯ ಸೌಕರ್ಯ ಕಲ್ಪಿಸಿ

15Naregal2..No..
Published on

ನರೇಗಲ್ಲ: ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಸ್ಥಳದಲ್ಲಿ ಕಾರ್ವಿುಕರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಸಿದರು.

ಸಮೀಪದ ನಿಡಗುಂದಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

ಕರೊನಾ ಮಹಾಮಾರಿಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಅದಕ್ಕೆ ಪರಿಹಾರವಾಗಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿವೆ. ಯಾವುದೇ ಕಾರಣಕ್ಕೂ ಕರೊನಾ ರೋಗದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಕಡ್ಡಾಯವಾಗಿ ಸರ್ಕಾರದ ನಿಯಮಾವಳಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಕಡ್ಡಾಯವಾಗಿ ಕಾರ್ವಿುಕರ ಆರೋಗ್ಯ ತಪಾಸಣೆ ಮಾಡಿಸಬೇಕು. ಕುಡಿಯಲು ನೀರು ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.

ಇದಕ್ಕೂ ಮುನ್ನ ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ ಅವರು ಕಾಮಗಾರಿಗೆ ಚಾಲನೆ ನೀಡಿದರು. ತಾಪಂ ಇಒ ಸಂತೋಷಕುಮಾರ ಪಾಟೀಲ, ಗ್ರಾಪಂ ಅಧ್ಯಕ್ಷೆ ಬಸವಣ್ಣೆವ್ವ ಮಡಿವಾಳರ, ಉಪಾಧ್ಯಕ್ಷೆ ಗೀತಾ ಮಾದರ, ಪಿಡಿಒ ಬಿ.ಪಿ. ಓಲೇಕಾರ, ಈರಪ್ಪ ಬಿಚ್ಚೂರ, ಫಕೀರಪ್ಪ ಕುಕನೂರ, ಸುರೇಶ ಗಂಗರಗೊಂಡ, ಹುಚ್ಚಿರಪ್ಪ ಗಡಾದ, ಎಸ್.ಕೆ. ಚಂದಾಲವರ ಇತರರು ಇದ್ದರು.

ಬದು ನಿರ್ಮಾಣ ಕಾಮಗಾರಿಯಲ್ಲಿ 519 ಕೂಲಿ ಕಾರ್ವಿುಕರು ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net