

ಹುಬ್ಬಳ್ಳಿ: ಕಾರ್ವಿುಕ ಕಲ್ಯಾಣ ನಿಧಿಯ ಹಣ ದುರ್ಬಳಕೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದ ಬಳಿಕ ಮಂಗಳವಾರ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಬೇಕಿದೆ. ಆ ವೇಳೆ ಕಾರ್ವಿುಕ ಕಲ್ಯಾಣ ನಿಧಿಯ ಹಣದ ದುರ್ಬಳಕೆಯಾಗಿರುವ ಆರೋಪಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ನಾನು 18 ತಿಂಗಳು ಕಾರ್ವಿುಕ ಸಚಿವನಾಗಿದ್ದೆ. ಈ ಬಾರಿ ಅದೇ ಖಾತೆ ಸಿಕ್ಕಿದ್ದು, ಇನ್ನು ಹೆಚ್ಚಿನ ಕಾರ್ಯಕ್ರಮ ಹಾಗೂ ಕೆಲಸ ಮಾಡಲು ಅವಕಾಶ ಸಿಕ್ಕಂತಾಗಿದೆ. ಖಂಡಿತವಾಗಿಯೂ ಕಾರ್ವಿುಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜೂನ್ 1ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಪ್ರಥಮ ಸಚಿವ ಸಂಪುಟ ಸಭೆ ನಡೆಯಲಿದೆ. ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಭರವಸೆಗಳ ಬಗ್ಗೆ ಕರ್ನಾಟಕದ ಜನತೆಗೆ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂದರು.