

ಕುಶಾಲನಗರ: ಇಲ್ಲಿನ ಪುರಸಭೆ ಪಟ್ಟಣದ ಪ್ರಮುಖ ವೃತ್ತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತವನ್ನು ಅಭಿವೃದ್ಧಿ ಹೆಸರಿನಲ್ಲಿ ವಿರೂಪಗೊಳಿಸಿ ತಿಂಗಳುಗಳೇ ಕಳೆದರೂ ಯಾರೂ ಇತ್ತ ಗಮನಹರಿಸಿಲ್ಲ ಎಂದು ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
5 ಲಕ್ಷ ರೂ.ನಷ್ಟು ವೆಚ್ಚ ಮಾಡಿ ನಿರ್ಮಿಸಿದ್ದ ವೃತ್ತವನ್ನು ಕೆಲ ವರ್ಷಗಳಲ್ಲೇ ಒಡೆದು ಹಾಕಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚೆನ್ನಾಗಿದ್ದ ಗ್ರಾನೈಟ್ ತೆಗೆದು ಬೇರೆ ಹೊಸ ಗ್ರಾನೈಟ್ ಕಲ್ಲುಗಳನ್ನು ಹಾಕುವ ಉದ್ದೇಶವಾದರೂ ಏನು ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಯಾವುದೇ ಪೂರ್ವ ತಯಾರಿ ಇಲ್ಲದೆ ಈ ಕಾಮಗಾರಿ ಮಾಡಿದ್ದಾರೆ. ಇದರಿಂದ ಕಾರ್ಯಪ್ಪ ಅವರಿಗೆ ಅವಮಾನ ಮಾಡಿದಂತಾಗಿದೆ. ಈಗಲಾದರೂ ಕಾರ್ಯಪ್ಪ ಅವರ ಪ್ರತಿಮೆ ಮತ್ತು ಅವರಿಗೆ ಸಂಬಂಧಿಸಿದ ಕೋವಿ, ಬಟ್ಟೆ, ಟೋಪಿಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಬೇಕು. ಹೊಸ ವೃತ್ತದ ನೀಲಿ ನಕ್ಷೆಯನ್ನು ಸ್ಥಳದಲ್ಲಿ ಹಾಕಿ ಜನರ ಅಭಿಪ್ರಾಯದಂತೆ ಮಾಡಬೇಕೆಂದು ಕೃಷ್ಣ ಆಗ್ರಹಿಸಿದ್ದಾರೆ.