

ಹಿರೀಸಾವೆ: ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ದಿಡಗ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಅವ್ಯವಹಾರದ ಆರೋಪ ಕೊನೆಗೂ ಸಾಬೀತಾಗಿದ್ದು, 12 ಲಕ್ಷ ರೂ. ದಂಡ ಕಟ್ಟಬೇಕಾಗಿ ಶನಿವಾರ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ.
ಪತ್ನಿಯ ಹೆಸರಲ್ಲಿ ಉತ್ಪಾದಕರ ಕ್ರಮ ಸಂಖ್ಯೆ 133ನ್ನು ತೆರೆದು ಅಕ್ರಮವಾಗಿ ಅವರ ಖಾತೆಗೆ ಹಣ ಜಮೆ ಮಾಡಿಕೊಂಡಿರುವ ಬಗ್ಗೆ ಆರೋಪಿಸಿ ಗುರುವಾರ ರಾತ್ರಿ ಸಂಘದ ಎದುರು ಹಾಲಿನ ಕ್ಯಾನ್‌ಗಳನ್ನು ಇರಿಸಿ ಉತ್ಪಾದಕರು ಪ್ರತಿಭಟನೆ ನಡೆಸಿದ್ದರು.
ಸಂಘದ ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ, ಅಧ್ಯಕ್ಷ ಬಸವರಾಜ್ ಹಾಗೂ ಉತ್ಪಾದಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಅಂತಿಮವಾಗಿ ಶನಿವಾರ ತುರ್ತು ಸಭೆ ನಡೆಸಿ ಎಲ್ಲ ಸಮಸ್ಯೆ ಹಾಗೂ ಗೊಂದಲಗಳನ್ನು ಬಗೆಹರಿಸುವುದಾಗಿ ತಿಳಿಸಿದ ಹಿನ್ನೆಲೆ ಪ್ರತಿಭಟನೆ ಮೊಟುಕುಗೊಳಿಸಲಾಗಿತ್ತು.
ಅದರಂತೆ ಶನಿವಾರ ಬೆಳಗ್ಗೆ 11.30ಕ್ಕೆ ಸಭೆ ಪ್ರಾರಂಭಗೊಂಡಿತು. ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳು, ಆಡಳಿತ ಮಂಡಳಿ, ಉತ್ಪಾದಕರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದು ಸಂಘದ ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ ಡೇರಿಯಲ್ಲಿ ನಡೆಸಿರುವ ಅವ್ಯವಹಾರದ ಆರೋಪ ಚರ್ಚೆ ಹಂತ ಹಂತವಾಗಿ ರಂಗೇರಿತು.
ವಿಸ್ತರಣಾಧಿಕಾರಿಗಳು ಎಲ್ಲ ಕಡತಗಳನ್ನು ಪರಿಶೀಲಿಸಿದರು. ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ ತನ್ನ ಪತ್ನಿಯ ಹೆಸರಿನಲ್ಲಿರುವ ಬ್ಯಾಂಕ್ ಪುಸ್ತಕಗಳನ್ನು ಹಾಜರುಪಡಿಸಿದರು. ತನ್ನ ಪತ್ನಿ ಊರಿನಲ್ಲಿ ಇಲ್ಲದ ಕಾರಣ ಬ್ಯಾಂಕ್‌ನಲ್ಲಿ ಎಂಟ್ರಿ ಹಾಕಿಸಲು ಸಾಧ್ಯವಾಗಿಲ್ಲ ಎಂದು ಸಬೂಬು ಹೇಳಿ ನುಣುಚಿಕೊಳ್ಳಲು ಯತ್ನಿಸಿದರು.
ಆದರೆ ಉತ್ಪಾದಕರು ಹಾಗೂ ಪ್ರಮುಖರು, ಇದು ಸಮಂಜಸವಲ್ಲ ಸಭೆಗೆ ಅವಮಾನ ಮಾಡುವುದು ತರವಲ್ಲ. ನಿಮ್ಮ ಮೇಲೆ ಬಂದಿರುವ ಆರೋಪವನ್ನು ಎದುರಿಸಬೇಕೆ ಹೊರತು ನುಣುಚಿಕೊಳ್ಳುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.
ಬಳಿಕ ಕಾರ್ಯದರ್ಶಿಯು 2019ರಿಂದ ಇದುವರೆಗೆ ತನ್ನ ಪತ್ನಿಯ ಅಕೌಂಟ್‌ಗೆ ಜಮೆಯಾಗಿರುವ ಸ್ಟೇಟ್ಮೆಂಟ್ ತಂದು ಸಭಿಕರ ಮುಂದೆ ಹಾಜರುಪಡಿಸಿದರು. ಅದರಲ್ಲಿ 3 ಲಕ್ಷದ 60 ಸಾವಿರ ರೂ. ಹಣ ದುರುಪಯೋಗವಾಗಿರುವುದು ಕಂಡುಬಂದಿತು.
ಆದರೆ ಉತ್ಪಾದಕರು ತೆಗೆಸಿರುವ ಪತ್ರ-ಪುರಾವೆಗಳಲ್ಲಿ ಸುಮಾರು 36 ಲಕ್ಷ ರೂ.ಗೂ ಹೆಚ್ಚಿನ ಅವ್ಯವಹಾರ ನಡೆದಿರುವ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಈ ಎರಡೂ ಸಾಕ್ಷಿಗಳ ಬಗ್ಗೆ ಸಂಜೆ 4.30 ರ ವರೆಗೂ ವಾದ-ವಿವಾದ ನಡೆದರೂ ಬಗೆಹರಿಯುವ ಲಕ್ಷಣ ಕಾಣಲಿಲ್ಲ.
40 ಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುವ ಡಿ.ಬಿ.ಮಲ್ಲಿಕಾರ್ಜುನ್ ಇತ್ತೀಚಿನ 4 ವರ್ಷದಲ್ಲಿ ದುರುಪಯೋಗವಾಗಿರುವ 3.60 ಲಕ್ಷ ರೂ. ಕಟ್ಟುವುದಾಗಿ ಹಠ ಹಿಡಿದರು. ಆದರೆ ಉತ್ಪಾದಕರು 75 ಲಕ್ಷ ರೂ.ಗಳನ್ನು ಸಂಘದ ಖಾತೆಗೆ ಪಾವತಿಸುವಂತೆ ಪಟ್ಟು ಹಿಡಿದರು.
ಕೊನೆಗೆ ಸಂಘದ ಅಧ್ಯಕ್ಷರು, ಇಬ್ಬರು ನಿರ್ದೇಶಕರು, ಮೂವರು ಉತ್ಪಾದಕರು ಹಾಗೂ ಐದಾರು ಮಂದಿ ಪ್ರಮುಖರು ಬೇರೆಡೆ ತೆರಳಿ ಗೌಪ್ಯವಾಗಿ ಚರ್ಚಿಸಿ ನಂತರ ಸಭೆಯಲ್ಲಿ ಎರಡೂ ಕಡೆಯವರ ಒಪ್ಪಿಗೆ ಪಡೆದು 12 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ವಿಧಿಸಿ ತೀರ್ಮಾನ ನೀಡಿದರು.
ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ್ ಹಾಗೂ ಉತ್ಪಾದಕರು ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು. ಸದ್ಯಕ್ಕೆ ಆರೋಪ ಹಾಗೂ ಗೊಂದಲಕ್ಕೆ ತೆರೆಬಿದ್ದಿದೆ. ಸಂಘದ ಅಧ್ಯಕ್ಷ ಬಸವರಾಜು, ಪ್ರಮುಖರಾದ ಎನ್.ಎನ್.ನಾಗರಾಜ್, ಕೆ.ಟಿ.ನಾಗರಾಜ್, ನರಿಹಳ್ಳಿ ತಾತೇಗೌಡ, ಉತ್ಪಾದಕರಾದ ಮೂರ್ತಿ, ಇಂದ್ರೇಶ್, ಬಾಲು, ಕೆ.ಪಿ.ರಾಮಕೃಷ್ಣ ಸೇರಿದಂತೆ ಹಲವರು ಇದ್ದರು.