ಕಾರ್ಯಕ್ಷಮತೆ ವೃದ್ಧಿಗೆ ‘ಪ್ರೇರಣಾ’ ಟಾನಿಕ್

27-9
ಬೆಳಗಾವಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರೇರಣಾ ತರಬೇತಿ ಪಡೆಯುತ್ತಿರುವ ಶಿಕ್ಷಕರು.
Published on

ಶಿವಾನಂದ ಕಲ್ಲೂರ ಬೆಳಗಾವಿ: ಡಿಜಿಟಲ್ ಜಮಾನಾದ ಬೆನ್ನು ಬಿದ್ದಿರುವ ಇಂದಿನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ ಸಮುದಾಯ ಸದಾ ಒಂದಿಲ್ಲೊಂದು ಹೊಸತನಕ್ಕೆ ಒಗ್ಗಿಕೊಳ್ಳಲೇಬೇಕಿದೆ. ವೃತ್ತಿಪರ ಒತ್ತಡದಲ್ಲೂ ಪರಿಹಾರಾತ್ಮಕ ವಿಧಾನಗಳನ್ನು ಸೃಜಿಸುವ ಮೂಲಕ ತಮ್ಮ ಕಾರ್ಯಕ್ಷಮತೆ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆ ವೃದ್ಧಿಸುವುದಕ್ಕಾಗಿ ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹೊಸತನಕ್ಕೆ ಅಣಿಯಾಗಿದೆ.

ಸವಾಲುಗಳನ್ನು ಪರಿಹರಿಸಿಕೊಳ್ಳುತ್ತ ಸ್ವಯಂ ಒತ್ತಡ ನಿವಾರಿಸಿಕೊಳ್ಳುವುದು. ವೃತ್ತಿಪರ ಕೌಶಲಗಳನ್ನು ವೃದ್ಧಿಸಿಕೊಂಡು ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬಿ, ಹುರಿದುಂಬಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ವಿನೂತನ ಪ್ರಯೋಗ ಮಾಡುತ್ತಿದ್ದು, ‘ಪ್ರೇರಣಾ’ ಎಂಬ ವಿಶೇಷ ತರಬೇತಿ ನೀಡುತ್ತಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಸವದತ್ತಿ ತಾಲೂಕುಗಳ ಆಸಕ್ತ 60 ಜನ ಸಿಆರ್‌ಪಿ ಹಾಗೂ ಬಿಆರ್‌ಸಿಗಳನ್ನು ತರಬೇತಿಗೆ ಆಯ್ಕೆಮಾಡಲಾಗಿದೆ. ಈಗಾಗಲೇ ಎರಡು ಹಂತದ ತರಬೇತಿ ಮುಗಿದಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ, ಹೊಸ ಟಾಸ್ಕ್ ನೀಡಲು, ಸಿಟಿಇ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದ ಕಾರ್ಪೋರೇಟ್ ಕಂಪನಿಗಳ ಸಿಬ್ಬಂದಿ ಹಾಗೂ ಕ್ರೀಡಾಪಟುಗಳಿಗೆ ಸಮಯ ಪಾಲನೆ, ಶಿಸ್ತು, ಸ್ವಯಂ ಮೌಲ್ಯಮಾಪನ ಹಾಗೂ ನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳಿಗೆ ತತಕ್ಷಣ ಪರಿಹಾರ ಕಂಡುಕೊಳ್ಳುವಿಕೆ ಕುರಿತು ಉತ್ಕೃಷ್ಟ ಮಟ್ಟದ ತರಬೇತಿ ನೀಡುವ ಕರ್ನಲ್ ಪ್ರಸಾದ ವಸ್ತ್ರದ ಅವರಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು, ಸಿಆರ್‌ಪಿ ಹಾಗೂ ಬಿಆರ್‌ಸಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಗ್ರಂಥಾಲಯ, ಕುಡಿಯುವ ನೀರು ಮತ್ತು ಶೌಚಗೃಹ, ತಂತ್ರಜ್ಞಾನ ಬಳಕೆ, ಪರಿಸರ ಸ್ನೇಹಿ ಕೈತೋಟ, ಎಸ್‌ಡಿಎಂಸಿ ಸೇರಿ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಕಲಿಕಾ ಫಲಗಳ ಅನುಷ್ಠಾನ ಎಂಬ 6 ಅಂಶಗಳ ಎಲ್ಲ ಮಾನಕಗಳಿಗೂ ಸಮಾನ ಅಂಕಗಳಿವೆ. ತರಬೇತಿ ಬಳಿಕ ದತ್ತು ಪಡೆಯುವ ಶಾಲೆಗಳನ್ನು ಅವರಿಗೆ ನೀಡುವ ಮುನ್ನ, ಮೌಲ್ಯಮಾಪನ ಮಾಡಲಾಗುತ್ತದೆ. ಕಡಿಮೆ ಅಂಕ ಪಡೆದ ಶಾಲೆ ದತ್ತು ಪಡೆದರೆ ಹೆಚ್ಚಿನ ಅಂಕ ಸಾಧನೆಗೆ ಅವಕಾಶ ಎಂಬುದನ್ನು ಮನದಟ್ಟು ಮಾಡಲಾಗುತ್ತದೆ.
ಅವುಗಳಲ್ಲಿ ಸೌಲಭ್ಯ, ಬಳಕೆ, ಪರಿಣಾಮ ಹಾಗೂ ಅನ್ವಯ ಎಂಬಂತೆ ಹಲವು ಅಂಶಗಳಲ್ಲಿ ಮೌಲ್ಯಾಂಕನ ಮಾಡಲಾಗುತ್ತದೆ. ತರಬೇತಿ ಪಡೆದ ಪ್ರತಿಯೊಬ್ಬರೂ ಸೌಲಭ್ಯ ವಂಚಿತ ಹಾಗೂ ಹಿಂದುಳಿದ ಸರ್ಕಾರಿ ಶಾಲೆಯನ್ನು ದತ್ತು ಪಡೆಯಬೇಕು. ಬಳಿಕ 6 ತಿಂಗಳಲ್ಲಿ ಆ ಶಾಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣದಲ್ಲಿ ಇರದರಿಂದ ಗುಣಾತ್ಮ ಬದಲಾವಣೆ ಬಂದರೆ, ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಶಿಕ್ಷಕರಿಗೆ ವಿಸ್ತರಿಸುವುದು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಯೋಜನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net