

ವಿಜಯಪುರ: ಆಯುಷ್ಮಾನ ಭಾರತ ಕಾರ್ಡ್ ಹೊಂದುವ ಮೂಲಕ ಸರ್ಕಾರದಿಂದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ದೇಶಾದ್ಯಂತ ಈ ಆಯುಷ್ಮಾನಭವ ಅಭಿಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮರ್ಮು ವರ್ಚುವಲ್ ಮೂಲಕ ಚಾಲನೆ ನೀಡಿದ ನಂತರ
ಬುಧವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಂಸದರು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಆಶಯದಂತೆ ಅಕ್ಟೋಬರ್-2ರವರೆಗೆ ಪ್ರತಿಯೊಬ್ಬ ನಾಗರಿಕರಿಗೆ ಉತ್ತಮ ಆರೋಗ್ಯ ಸೌಕರ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದ್ದು, ಪಂಚಾಯತಿ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಆಯುಷ್ಮಾನ ಶಿಬಿರಗಳನ್ನು ಪ್ರತಿ ವಾರ ಹಮ್ಮಿಕೊಂಡು ಕಾರ್ಡ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಆರೋಗ್ಯ ಜಾಗೃತಿಗಾಗಿ ಅಂತ್ಯೋದಯ ಗುರಿಯಾಗಿಸಿಕೊಂಡು ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಒದಗಿಸುವ ಗುರಿ ಹೊಂದಲಾಗಿದೆ. ಈ ಕುರಿತು ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು. ಪ್ರತಿ ಕಾರ್ಡ್ ಹೊಂದಿದ ವ್ಯಕ್ತಿಗಳಿಗೆ ಸುಮಾರು 5 ಲಕ್ಷ ರೂ.ಗಳವರೆಗೆ 12 ವಿವಿಧ ಖಾಯಿಲೆಗಳ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಕಾಡ್ ಪಡೆದುಕೊಂಡ ಎಂ.ಆಯ್.ನಾಟೀಕಾರ ಮಾತನಾಡಿ, ಆಯುಷ್ಮಾನ ಕಾರ್ಡ್ ತುಂಬ ಉಪಯುಕ್ತವಾಗಿದೆ. ನಗರದ ಬಿದರಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದು, ಶಸ ಚಿಕಿತ್ಸೆಗಾಗಿ ಯಾವುದೇ ವೆಚ್ಚವಾಗಿಲ್ಲ. ಎಲ್ಲವೂ ಉಚಿತ ಚಿಕಿತ್ಸೆ ದೊರೆತಿದೆ. ಪ್ರತಿಯೊಬ್ಬರು ಆಯುಷ್ಮಾನ ಭಾರತ ಕಾರ್ಡ್ ಪಡೆದು, ಆರೋಗ್ಯಯುತ ಜೀವನ ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ ಚಿಕಿತ್ಸಕ ಎಸ್.ವಾಯ್.ಲಕ್ಕಣ್ಣವರ, ಆಯುಷ್ಮಾನ ಕಾರ್ಡ್ ಹೊಂದಿದ ಲಾನುಭವಿಗಳಿಗೆ ಸಾಂಕೇತಿಕವಾಗಿ ಕಾರ್ಡ್ ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕವಿತಾ ದೊಡಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸಂಪತ್ ಗುಣಾರಿ, ಆರ್.ಸಿ.ಎಚ್.ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ, ಡಾ.ರಾಜೇಶ್ವರಿ ಗೊಲಗೇರಿ, ಡಾ.ಜೈಬುನ್ನಿಸಾ ಬೀಳಗಿ, ಡಾ.ಎ.ಪಿ.ಹಿಟ್ನಳ್ಳಿ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಅಧಿಕಾರಿ ಸುರೇಶ ಇದ್ದರು.