

ಚಾಮರಾಜನಗರ: ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ನೆರವಾಗಲು ಜಿಲ್ಲಾಡಳಿತ ರೂಪಿಸಿರುವ ಅನೇಕ ಕಾರ್ಯಕ್ರಮ, ಯೋಜನೆಗಳ ಮಾಹಿತಿ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಬುಧವಾರ ಬಿಡುಗಡೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಅಧಿಕಾರಿ ಕಚೇರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರೂಪಿಸಲಾಗಿರುವ ಆರೋಗ್ಯ ಸಂಬಂಧ ಮಾಹಿತಿಯನ್ನು ಪ್ರಚುರಪಡಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಜನತೆಗೆ ಆರೋಗ್ಯ ಪೂರಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನಾನಾ ಉಪಯೋಗಿ ಕಾರ್ಯಕ್ರಮಗಳನ್ನು ರೂಪುಗೊಳಿಸಿ ಅನುಷ್ಠಾನ ಮಾಡಲಾಗುತ್ತಿದೆ. ನಾಗರಿಕರ ಆರೋಗ್ಯ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ಕಾರ್ಯಕ್ರಮಗಳು ಎಲ್ಲ ಜನರನ್ನು ತಲುಪಿದರೆ ಮಾತ್ರ ನಮ್ಮ ಉದ್ದೇಶ ಸಲವಾಗುತ್ತದೆ. ಹೀಗಾಗಿ ಜನರಿಗೆ ಪ್ರಯೋಜನವಾಗಲೆಂದು ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳ ಮಾಹಿತಿ ಹಲವು ವಿಧಾನಗಳ ಮೂಲಕ ತಿಳಿಸಬೇಕಿದೆ ಎಂದರು.
ಆರೋಗ್ಯ ಸೇತು ಆ್ಯಪ್, ಆಯುಷ್ ಪದ್ಧತಿಯಿಂದ ವೈರಾಣು ಸೋಂಕನ್ನು ತಡೆಗಟ್ಟುವ ವಿಧಾನ, ಹಿರಿಯ ನಾಗರಿಕರ, ಮಹಿಳೆಯರ, ತೃತೀಯ ಲಿಂಗಿಗಳ ಕೌಟುಂಬಿಕ ಹಾಗೂ ಮಾನಸಿಕ ತೊಂದರೆ ಒತ್ತಡಗಳ ನಿರ್ವಹಣೆಗಾಗಿ ತೆರೆಯಲಾಗಿರುವ ಆಸರೆ ಸಹಾಯವಾಣಿ, ಮನೆಯಿಂದಲೇ ದೂರವಾಣಿ ಮೂಲಕ ಸಂಪರ್ಕಿಸಿ ಮನೆ ಬಾಗಿಲಿಗೆ ಔಷಧ ತರಿಸಿಕೊಳ್ಳಬಹುದಾದ ಔಷಧ ಮಿತ್ರ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಭಿತ್ತಿಪತ್ರದಲ್ಲಿ ಆಳವಡಿಸಲಾಗಿದೆ.
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ವೈದ್ಯಾಧಿಕಾರಿ ಡಾ.ಮಹೇಶ್, ವಾರ್ತಾ ಮತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ.ರಮೇಶ್, ಜಿಲ್ಲಾ ಕಾರ್ಮಿಕಾಧಿಕಾರಿ ಮಹದೇವಯ್ಯ, ನಿರೀಕ್ಷಕರಾದ ಗೀತಾ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಮಹೇಶ್, ಡಾ.ಬಿ.ಗಿರೀಶ್ ಹಾಜರಿದ್ದರು.