ಕಾರ್ಯಕರ್ತರು ಪ್ರತಿಜ್ಞೆ ಫಲ ಈ ಗೆಲುವು:ಕೆ.ಎಂ. ಶಿವಲಿಂಗೇಗೌಡ

ಕಾರ್ಯಕರ್ತರು ಪ್ರತಿಜ್ಞೆ ಫಲ ಈ ಗೆಲುವು:ಕೆ.ಎಂ. ಶಿವಲಿಂಗೇಗೌಡ
Published on

ಹಾಸನ: ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬವನ್ನ ಸೋಲಿಸಲು ಆಗುವುದಿಲ್ಲ ಎಂಬ ಮಾತುಗಳಿದ್ದವು. ಆದರೆ ಜಿಲ್ಲೆಯ ಎಲ್ಲಾ ಕ್ರಾಂಗ್ರಸ್ ಮುಖಂಡರು, ಕಾರ್ಯಕರ್ತರು ಪ್ರತಿಜ್ಞೆ ಮಾಡಿದರ ಫಲವಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಮೇಲೆ ವಿಶ್ವಾಸ ಇಟ್ಟು ನಮ್ಮ ಪಕ್ಷದ ವರಿಷ್ಠರು ಶ್ರೇಯಸ್ ಪಟೇಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಕಳೆದ 25 ವರ್ಷಗಳಿಂದ ಈ ಗೆಲುವಿಗಾಗಿ ಕಾರ್ಯಕರ್ತರ ಮತ್ತು ಮುಖಂಡರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕೆಲ ಸಣ್ಣಪುಟ್ಟ ತಪ್ಪುಗಳು ಮತ್ತು ವ್ಯತ್ಯಾಸದಿಂದ 3-4 ಸ್ಥಾನಗಳನ್ನ ಕಳೆದುಕೊಳ್ಳಬೇಕಾಗಿತ್ತು. ಆದರೆ ಈಗ ಅವೆಲ್ಲ ಸಮಸ್ಯೆಗಳನ್ನು ಬದಿಗಿಟ್ಟು ಎಲ್ಲಾ ಮುಖಂಡರು ಸಾಮೂಹಿಕವಾಗಿ ಹೋರಾಟ ಮಾಡಿದರ ಪರಿಣಾಮ ಜಿಲ್ಲೆಯಲ್ಲಿ ಭರ್ಜರಿ ವಿಜಯವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಹೆಚ್ಚು ಮತ ಜೆಡಿಎಸ್‌ಗೆ ಹೋಗಿದೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ರಾಷ್ಟ್ರದ ಚುನಾವಣೆ ಮತ್ತು ಮೋದಿಯವರ ಮುಖ ನೋಡಿಕೊಂಡು ಜನ ವೋಟ್ ಹಾಕಿದ್ದಾರೆ. ನಾನು ಮತ ಕೇಳಲು ಹೋದಾಗ ದಯಮಾಡಿ ನೀವು ಬರಬೇಡಿ, ನಾವು ನಿಮಗೆ ಮತ ಹಾಕುವುದಿಲ್ಲ, ನಿಮ್ಮ ಚುನಾವಣೆಗೆ ಮತ ಹಾಕುತ್ತೇವೆ ಆದರೆ ಈ ಬಾರಿ ಮೋದಿಯವರನ್ನ ಗೆಲ್ಲಿಸಬೇಕು ಎಂದು ಹೇಳುತ್ತಿದ್ದರು ಎಂದರು.
ಚುನಾವಣೆಯಲ್ಲಿ ಪೆನ್‌ಡ್ರೈವ್ ಯಾವುದೇ ರೀತಿ ಪರಿಣಾಮ ಬೀರಿರುವುದಿಲ್ಲ, ಈ ವಿಚಾರ ಜಿಲ್ಲೆಯ ಜನರಿಗೆ ಗೊತ್ತಿರುವುದಿಲ್ಲ. ನನಗೆ ಸರಿಯಾಗಿ ಗೊತ್ತಿರುವುದಿಲ್ಲ, ಆತ ವಿದೇಶಕ್ಕೆ ಹೋಗಿದ್ದಾಗ ನಾನು ವಿಶ್ರಾಂತಿಗಾಗಿ ಹೋಗಿದ್ದ ಎಂದು ತಿಳಿದುಕೊಂಡಿದ್ದೆ, ಆನಂತರ ಮಾಧ್ಯಮಗಳಲ್ಲಿ ತಿಳಿದ ನಂತರ ಇಷ್ಟೆಲ್ಲ ನಡೆದಿದೆ ಎಂಬುದಾಗಿ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬಂದ ಸಂದರ್ಭದಲ್ಲಿ ನನಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದರು. ಅದು ಅವರಿಗೆ ಬಿಟ್ಟ ವಿಚಾರ ನಾನು ಮಂತ್ರಿ ಆಗಲೇಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ನನಗೆ ಸಚಿವ ಸ್ಥಾನ ಕೊಡುವ ಭರವಸೆಯಿಂದ ನಾನು ಕಾಂಗ್ರೆಸ್ ಸೇರ್ಪಡೆಯಾಗಿರುವುದು. ಕೇವಲ ಶಾಸಕನಾಗಿ ಇರಬೇಕು ಎಂದಿದ್ದರೆ ಜೆಡಿಎಸ್‌ನಲ್ಲಿ ಇರುತ್ತಿದ್ದೆ, ಸಚಿವನಾಗಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಸೇರಿದ್ದೇನೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net