

ಭಾಲ್ಕಿ: ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು, ಆರ್ಥಿಕವಾಗಿ ಸಬಲತೆ ಹೊಂದಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಾರ್ಮಿಕ ಇಲಾಖೆ, ಕರುನಾಡ ಕಾರ್ಮಿಕರ ವೇದಿಕೆ ಹಾಗೂ ಕಾರ್ಮಿಕ ಪರ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ದುಡಿಮೆ ಮತ್ತು ಶ್ರಮಕ್ಕೆ ತಕ್ಕ ಗೌರವ ಸಿಗಬೇಕು ಎಂದರು.
೧೯ನೇ ಶತಮಾನದಲ್ಲಿ ಕೈಗಾರೀಕರಣ ಆದ ನಂತರ ಜಗತ್ತಿನಲ್ಲಿ ಬದಲಾವಣೆ ಗಾಳಿ ಬೀಸಿತು. ಕಾರ್ಮಿಕರ ಕಠಿಣ ಶ್ರಮವಿತ್ತು. ಆದರೆ ಅವರಿಗೆ ಯಾವುದೇ ಕಾನೂನು, ನಿಯಮಗಳಿರಲಿಲ್ಲ. ಇಂಥ ಸಂದರ್ಭದಲ್ಲಿ ಕಾರ್ಮಿಕರ ಸೌಲಭ್ಯಕ್ಕಾಗಿ ಹೋರಾಡಿದ ಮಹನೀಯರು, ತಮ್ಮ ಪ್ರಾಣ ಮತ್ತು ಜೀವನ ಲೆಕ್ಕಿಸದೆ ಹೋರಾಡಿದ ಫಲವಾಗಿ ಕಾರ್ಮಿಕರ ಕಾನೂನು ರಚಿಸಲಾಯಿತು. ಅಂದಿನಿಂದ ಕಾರ್ಮಿಕರು ೮ ಗಂಟೆಗಳಕಾಲ ಮಾತ್ರ ದುಡಿಯುವಂತಾಗಿದೆ ಎಂದು ಹೇಳಿದರು.
ಕಾರ್ಮಿಕರು ಬೆಳಗ್ಗೆಯಿಂದ ಸಂಜೆ ವರೆಗೆ ದುಡಿಯುತ್ತಾರೆ. ಅದರಿಂದ ಬಂದ ಹಣವನ್ನು ದುಶ್ಚಟಗಳಿಗೆ ಹಾಕುತ್ತಾರೆ. ದುಶ್ಚಟಗಳನ್ನು ಬಿಟ್ಟು ಕಾರ್ಮಿಕರು ಆರ್ಥಿಕವಾಗಿ ಸಬಲರಾಗುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ವಿವಿಧ ಸೌಲಭ್ಯಗಳನ್ನು ೭೦೮ ಕಾರ್ಮಿಕರಿಗೆ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ತಾಲೂಕಾಧ್ಯಕ್ಱ ಚಂದ್ರಶೇಖರ ಬನ್ನಾಳೆ, ಕಾರ್ಯದರ್ಶಿ ರಾಜಪ್ಪ ಪಾಟೀಲ್, ಖಜಾಂಚಿ ಸುನೀಲ ಬಿರಾದಾರ್, ರಾಜ್ಯಪರಿಷತ್ ಸದಸ್ಯ ಬಸವರಾಜ ಭಂಗಾರೆ ಅವರನ್ನು ಸನ್ಮಾನಿಸಲಾಯಿತು.
ಕರುನಾಡ ಕಾರ್ಮಿಕರ ವೇದಿಕೆ ಸಂಸ್ಥಾಪಕ ಚಂದ್ರುಗೌಡ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಾ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಕಾರ್ಮಿಕ ಇಲಾಖೆ ಆಯುಕ್ತ ಮಹೇಶ ಕುಳಳಿ, ತಾಪಂ ಇಒ ಸೂರ್ಯಕಾಂತ ಬಿರಾದಾರ್, ಸಿಪಿಐ ಬಿ.ಅಮರೇಶ್, ಕಾರ್ಮಿಕ ಅಧಿಕಾರಿ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಪ್ರಮುಖರಾದ ಹಣಮಂತರಾವ ಚವ್ಹಾಣ್, ಬಿ.ಸಿ. ಲಕ್ಷ್ಮಣ ಇತರರಿದ್ದರು. ಅನೀಲ ಹಾಲೆಹಿಪುರ್ಗೆ ಸ್ವಾಗತಿಸಿದರು. ದೀಪಕ್ ಥಮಕೆ ನಿರೂಪಣೆ ಮಾಡಿದರು. ಅಂಬರೀಶ್ ಮಲ್ಲೇಶಿ ವಂದಿಸಿದರು.
ಇದಕ್ಕೂ ಮುನ್ನ ನಡೆದ ಮೆರವಣಿಗೆಗೆ ಸಂಸದ ಸಾಗರ್ ಖಂಡ್ರೆ ಚಾಲನೆ ನೀಡಿದರು. ಭಾಲ್ಕೇಶ್ವರ ಮಂದಿರದಿಂದ ಆರಂಭವಾದ ಮೆರವಣಿಗೆ ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಪುರಭವನಕ್ಕೆ ಆಗಮಿಸಿ ಸಮಾವೇಶಗೊಂಡಿತು.
ಪುರಸಭೆಯಿಂದ ಪಟ್ಟಣದಲ್ಲಿ ಸ್ಥಳವನ್ನು ಗುರುತಿಸಿ ಭಾಲ್ಕಿಯಲ್ಲಿ ಶೀಘ್ರ ಕಾರ್ಮಿಕರ ಭವನ ನಿರ್ಮಿಸಲಾಗುವುದು. ಮನವಿ ಮೇರೆಗೆ ಕಾರ್ಮಿಕರ ಮಕ್ಕಳಿಗಾಗಿ ವಸತಿ ನಿಲಯ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ