

ಚಿಕ್ಕಮಗಳೂರು: ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನ ಸಹಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆೆ. ಸ್ವಾಭಾವಿಕ ಮರಣ, ಮದುವೆ ಧನಸಹಾಯ, ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಕಲ್ಯಾಣ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಂಕಷ್ಟದಿAದ ಜೀವನ ನಡೆಸುತ್ತಿರುವ ಕಾರ್ಮಿಕ ಫಲಾನುಭವಿಗಳಿಗೆ ಮದುವೆ ಸೇರಿದಂತೆ ಹಲವಾರು ಸೌಲಭ್ಯದ ಧನಸಹಾಯದ ಹಣವು ಖಾತೆಗೆ ಜಮಾಯಾಗಿಲ್ಲ. ಕಾರ್ಮಿಕರಲ್ಲದವರನ್ನು ನೋಂದಾಯಿಸಿಕೊAಡ ಕಾರಣ, ನೈಜ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಇದನ್ನು ತಡೆಗಟ್ಟಿ ಅನಧಿಕೃತರನ್ನು ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಸರ್ಕಾರ ಕಾರ್ಮಿಕರ ದುಡಿಮೆಗೆ ಅನುಕೂಲವಾಗಲು ಕಾರ್ಮಿಕ ಕಿಟ್‌ಗಳನ್ನು ನೀಡುತ್ತಿದೆ. ಆದರೆ ಕಾರ್ಮಿಕರಿಗೆ ಸಾವಿರಾರು ರೂ. ಬೆಲೆಯ ಗುಣಮಟ್ಟದ ಕಿಟ್‌ಗಳನ್ನು ವಿತರಿಸುವ ಬದಲು ಕೆಲಸಕ್ಕೆ ಬಾರದ ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಾರ್ಮಿಕ ಮಂಡಳಿ ವಿತರಿಸುವ ಮೂಲಕ ದ್ರೋಹವೆಸಗುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಕಾರ್ಮಿಕ ಕಿಟ್‌ಗಳನ್ನು ರಾಜಧಾನಿಯಲ್ಲಿ ಮಾರಾಟ ಮಾಡಿ ಅಧಿಕಾರಿಗಳು ಸಿಕ್ಕಿಕೊಂಡಿದ್ದಾರೆ. ಕಾರ್ಮಿಕರಿಗೆ ಕಿಟ್ ಪಡೆಯಲು ಆಧಾರ್, ಲೇಬರ್, ರೇಷನ್, ಸಿಆರ್‌ನಂಬರ್ ಸೇರಿದಂತೆ ಅನೇಕ ದಾಖಲೆಗಳನ್ನು ಪಡೆಯುತ್ತಾರೆ. ಈ ನಡುವೆ ಬೆಂಗಳೂರಿನಲ್ಲಿ ನೂರಾರು ಕಿಟ್‌ಗಳು ಅಂಗಡಿಗಳಲ್ಲಿ ಮಾರಾಟವಾಗಲು ಅಧಿಕಾರಿಗಳ ಭ್ರಷ್ಟಚಾರವೇ ನೇರ ಕಾರಣವಾಗಿದೆ ಎಂದರು.
ಕಾರ್ಮಿಕರ ನಿವೃತ್ತಿ ನಂತರ ಔಷಧ ಹಾಗೂ ಜೀನೋಪಾಯಕ್ಕೆ ಸರಿಯಾಗಿ ಮೂರು ಸಾವಿರ ರೂ. ಪಿಂಚ ಣಿ ವ್ಯವಸ್ಥೆಯನ್ನು ನೀಡುತ್ತಿಲ್ಲ. ಇದರಿಂದ ನಿವೃತ್ತ ಕಾರ್ಮಿಕರ ಬದುಕು ದುಸ್ಥಿತಿಗೆ ತಲುಪಿದೆ. ಮಕ್ಕಳ ಮದುವೆಗೆ ಸಮಯಕ್ಕೆ ಸರಿಯಾಗಿ ಮಂಡಳಿ ಧನಸಹಾಯದ ಹಣವನ್ನು ನೀಡದೇ ಸತಾಯಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಸದಸ್ಯರಾದ ಜಾನಕಿ, ಜಯಕುಮಾರ್, ಮಂಜುನಾಥ್, ಗೌರಮ್ಮ, ದಯಾಕ್ಷಿ, ಶ್ರೀಧರ್ ಮತ್ತಿತರರಿದ್ದರು.