ಕಾರ್ಮಿಕರಿಗೆ ಟಾರ್ಪಲ್ ಹೊದಿಸಿ ಲಾರಿಯಲ್ಲಿ ಸಾಗಿಸಲು ಯತ್ನ

29HSN2
Published on

ಹಾಸನ: ಕಾಫಿ ತೋಟದ ಕಾರ್ಮಿಕರಿಗೆ ಟಾರ್ಪಲ್ ಹೊದಿಸಿ ಲಾರಿಯಲ್ಲಿ ಬಚ್ಚಿಟ್ಟು ಮಡಿಕೇರಿಯಿಂದ ಹಾವೇರಿಗೆ ಸಾಗಿಸುತ್ತಿದ್ದ ಗುತ್ತಿಗೆದಾರ ಅರಕಲಗೂಡು ತಾಲೂಕಿನ ಕೊಡಗು ಜಿಲ್ಲೆಯ ಗಡಿ ಸಿದ್ದಾಪುರ ಗೇಟ್‌ನಲ್ಲಿ ಸಿಕ್ಕಿ ಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ಲಾರಿಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರು ಇದ್ದ ಕಾರಣ ಬಿಟ್ಟು ಕಳುಹಿಸಲಾಗಿದೆ ಎನ್ನಲಾಗಿದೆ.
ಹಾವೇರಿ ಮೂಲದವರು ಎನ್ನಲಾಗಿರುವ ಕಾರ್ಮಿಕರನ್ನು ಕೂಲಿ ಕೆಲಸಕ್ಕೆಂದು ಮಡಿಕೇರಿಗೆ ಕರೆಸಿಕೊಂಡಿದ್ದರು. ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನಲವತ್ತಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಲಾರಿಯಲ್ಲಿ ಬಚ್ಚಿಟ್ಟು ಮಡಿಕೇರಿಯಿಂದ ಹಾವೇರಿಗೆ ಕೊಣನೂರು, ಅರಕಲಗೂಡು, ಹಾಸನ , ಅರಸೀಕೆರೆ ಮಾರ್ಗವಾಗಿ ಕಳುಹಿಸಿಕೊಡಲು ಯತ್ನಿಸಿದ್ದರು.

ಅರಕಲಗೂಡು ಮತ್ತು ಕೊಡಗು ಗಡಿ ಭಾಗವಾದ ಸಿದ್ದಾಪುರ ಗೇಟ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಅನುಮಾನಗೊಂಡ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿಯಲ್ಲಿ ಮಹಿಳೆಯರು ಸೇರಿದಂತೆ 40 ಕೂಲಿ ಕಾರ್ಮಿಕರು ಇರುವುದು ಗೊತ್ತಾಗಿದೆ. ಬಳಿಕ ಅವರನ್ನು ಊರು ಸೇರುವಂತೆ ಸುರಕ್ಷಿತವಾಗಿ ಅದೇ ವಾಹನದಲ್ಲಿ ಕಳುಹಿಸಿಕೊಡಲಾಗಿದೆ. ಈ ಸಂಬಂಧ ಗುತ್ತಿಗೆದಾರನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net