

ಮೈಸೂರು; ಜಿಲ್ಲೆಯ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ, ತುಟ್ಟಿಭತ್ಯೆ ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಕುವೆಂಪುನಗರದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ವಿವಿಧ ಘೋಷಣೆ ಕೂಗಿ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಮಾಡಿದರು. ಕಾಯಂ ಗುತ್ತಿಗೆ, ಹೊರ ಗುತ್ತಿಗೆ, ದಿನಗೂಲಿ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿಯನ್ನು ನೀಡದೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕೈಗಾರಿಕೆ, ನೋಂದಾಯಿತ ಸಂಸ್ಥೆಗಳಾದ ಹೋಟೆಲ್, ಕ್ಲಬ್, ಹಾಸ್ಟೆಲ್, ಗಾರ್ಮೆಂಟ್, ಆಸ್ಪತ್ರೆ, ಖಾಸಗಿ ಶಾಲೆಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಏಪ್ರಿಲ್‌ನಿಂದ ಜಾರಿಯಾಗಬೇಕಾಗಿದ್ದ ತುಟ್ಟಿಭತ್ಯೆಯನ್ನೂ ನೀಡಿಲ್ಲ ಎಂದು ಕಿಡಿಕಾರಿದರು.
ಬಹುತೇಕ ಕಡೆಗಳಲ್ಲಿ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ನಿಗದಿಗಿಂತ ಹೆಚ್ಚಿನ ಅವಧಿವರೆಗೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರು ಸಂಘಟಿತರಾಗಲು ಅವಕಾಶವನ್ನೂ ನೀಡಿಲ್ಲ. ನೌಕರರಿಗೆ ಬೆದರಿಕೆಯೊಡ್ಡಿ ಯಾವುದೇ ಸೌಲಭ್ಯ ಸಿಗದಂತೆ ಮಾಡಲಾಗಿದೆ ಎಂದು ದೂರಿದರು.
ಹೆಚ್ಚುವರಿ ಕೆಲಸಕ್ಕೆ ನೀಡಬೇಕಾಗಿರುವ ಹೆಚ್ಚಿನ ವೇತನ ನೀಡುತ್ತಿಲ್ಲ. ರಾಷ್ಟ್ರೀಯ ಹಬ್ಬಗಳ ರಜೆ ದಿವಸಗಳಲ್ಲೂ ಇದೇ ರೀತಿ ವರ್ತಿಸುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಕಾರ್ಮಿಕರನ್ನು ನಿಂದಿಸಲಾಗುತ್ತಿದೆ. ಕಾರಣ ನೀಡದೆ ಕೆಲಸದಿಂದ ತೆಗೆಯಲಾಗುತ್ತಿದೆ. ಕಾರ್ಮಿಕರು ಉಸಿರುಗಟ್ಟುವ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಅಳಲು ತೊಡಿಕೊಂಡರು.
ಇದು ಕಾರ್ಮಿಕ ಇಲಾಖೆಯ ಗಮನಕ್ಕೆ ಬಂದಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸವನ್ನೂ ಮಾಡುತ್ತಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯವನ್ನೂ ಕೊಡಿಸುತ್ತಿಲ್ಲ. ಆದ್ದರಿಂದ ಇಂಥ ಅಧಿಕಾರಿಗಳು, ಸಂಬಂಧಪಟ್ಟ ಕೈಗಾರಿಕೆ, ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಜಯರಾಮ್, ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್, ಕಾರ್ಯಾಧ್ಯಕ್ಷ ಎಚ್.ಎಸ್.ಜಗದೀಶ್ ಇತರರು ಇದ್ದರು.