ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ

Oplus_131072
Oplus_131072
Published on

ನಂಜನಗೂಡು : ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ವ್ಯಾಪ್ತಿಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕ್ರಿಯಾನ್ ಟೆಕ್ಸ್‌ಟೈಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ವಿವಿಧ ಸವಲತ್ತುಗಳಿಗಾಗಿ ಆಗ್ರಹಿಸಿ ಕಾರ್ಖಾನೆ ಮುಂಭಾಗ ಗುರುವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಬಲ ನೀಡಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾ ಸಾಗರ್ ಮಾತನಾಡಿ, ಕಳೆದ 5 ವರ್ಷಗಳಿಂದ ಕಾರ್ಖಾನೆಯಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರಿಗೆ ಸಂಬಳ ಹೆಚ್ಚು ಮಾಡಿಲ್ಲ. ಬೋನಸ್ ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ.

ಇಎಸ್‌ಐ ಮತ್ತು ಪಿಎಫ್ ವ್ಯವಸ್ಥೆ ಕಲ್ಪಿಸಿಲ್ಲ. ಇದರ ಜತೆಗೆ ಸಂಬಳದ ಚೀಟಿ ಹಾಗೂ ಗುರುತಿನ ಚೀಟಿ, ಸಮವಸ್ತ್ರಗಳನ್ನು ನೀಡುತ್ತಿಲ್ಲ. ಇವರ ಬೇಡಿಕೆ ಈಡೇರಿಸುವವರೆಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕಾರ್ಮಿಕರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದರು.

ಹೋರಾಟಗಾರ ಬೊಕ್ಕಳ್ಳಿ ನಂಜುಂಡಸ್ವಾಮಿ ಮಾತನಾಡಿ, ಚಿಕ್ಕಯ್ಯನ ಛತ್ರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಗುತ್ತಿಗೆ ಆಧಾರದ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಈ ಬಗ್ಗೆ ಸಿದ್ದರಾಮಯ್ಯರವರೇ ಖುದ್ದಾಗಿ ತಿಳಿಸಿದರೂ ಕೂಡ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಗುತ್ತಿಗೆ ಕಾರ್ಮಿಕರು ಒಂದು ವೇಳೆ ಕೆಲಸದ ಸಂದರ್ಭದಲ್ಲಿ ಮರಣ ಹೊಂದಿದ್ದರು ಕೂಡ ಅವರಿಗೆ ಬೆಲೆ ಇಲ್ಲ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಇಮ್ಮಾವು ರಘು, ಬೊಕ್ಕ ಹಳ್ಳಿ ನಂಜುಂಡಸ್ವಾಮಿ, ಸಿದ್ದು ಕೆಎನ್, ನಾಗರಾಜು, ಸತೀಶ್ ಸೇರಿದಂತೆ ರೈತ ಸಂಘದ ಮುಖಂಡರು ಮತ್ತು ಗುತ್ತಿಗೆ ಆಧಾರದ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net