ಕಾರ್ಮಿಕರಲ್ಲಿ ಮತದಾನ ಜಾಗೃತಿ

bkt-30-3
Published on

ಬಾಗಲಕೋಟೆ: ಮತದಾನ ಜಾಗೃತಿ ಅಭಿಯಾನದಡಿ ಜಿಲ್ಲೆಯ ಲೋಕಾಪೂರದಲ್ಲಿ ಇರುವ ಜೆ.ಕೆ ಸಿಮೆಂಟ್ ಪ್ಯಾಕ್ಟರಿಯಲ್ಲಿರುವ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ನನ್ನ ಮತ ನನ್ನ ಹಕ್ಕು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸಿಇಓ ಆಗಿರುವ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಶಶಿಧರ ಕುರೇರ್ ಮೇ ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಹಾಗೂ ತಮ್ಮ ಕುಟುಂಬ ವರ್ಗದ ಅರ್ಹ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಲು ತಿಳಿಸಿದರು.

ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಹಕ್ಕನ್ನು ಪಡೆದಿದ್ದು, ಯಾವುದೇ ಒತ್ತಡಕ್ಕೆ ಮನಿಯದೇ ಮುಕ್ತವಾಗಿ, ನಿರ್ಭಯವಾಗಿ ಮತದಾನ ಮಾಡುವಂತೆ ತಿಳಿಸಿದರು. ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ, ಒತ್ತಡಕ್ಕೆ ಮಣಿಯದೇ ವಿವೇಕಚಿತ್ತರಾಗಿ ದೇಶದ ಪ್ರಜೆಗಳು ತಮ್ಮ ಪ್ರಭುತ್ವವನ್ನು ಕಳೆದುಕೊಳ್ಳದೇ ಮತ ಚಲಾಯಿಸಿ ಎಂದರು. ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಅರಿವು ಮೂಡಿಸಲಾಯಿತು.

ಸಿಮೆಂಟ ಪ್ಯಾಕ್ಟರಿಯ ಸಿಬ್ಬಂದಿಗಳು ಮತದಾನ ಜಾಗೃತಿಯ ಸಂದೇಶವುಳ್ಳ ರಂಗೋಲಿ ಬಿಡಿಸಿರುವುದು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ ಸೇರಿದಂತೆ ಜೆಕೆ ಸಿಮೆಂಟ್ ಪ್ಯಾಕ್ಟರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net