ಕಾರ್ಮಿಕರ ಹಿತ ಕಾಪಾಡಲು ಮುಂದಾಗಿ

Karmikaru
Published on

ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರ ಹಿತ ಕಾಪಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಉಚಿತ ಯೋಜನೆಗಳನ್ನು ನಿಲ್ಲಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು. ರಾಜ್ಯಾದ್ಯಂತ ನೋಂದಾಯಿತ ಗುತ್ತಿಗೆದಾರರು ಈ ಹಿಂದೆ ನಿರ್ವಹಿಸಿದ ಕಾಮಗಾರಿಗಳಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಶೇ 70ರಷ್ಟು ಕಡಿತಗೊಳಿಸಿದ್ದು, ಈ ಹಿಂದಿನಂತೆ ನೀಡಬೇಕು. ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರಿವೆಂಟರಿ ಹೆಲ್ತ್ ಕೇರ್ ಯೋಜನೆ ಜಾರಿಯಲ್ಲಿದ್ದು, ಇದನ್ನು ರದ್ದುಗೊಳಿಸಿ, ಸೆಸ್ ಹಣ ಹಿಂಪಡೆಯಬೇಕು. ಸಿಎಸ್‌ಸಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ನೋಂದಾಯಿತ ಕಾರ್ಮಿಕ ಸಂಘಟನೆಗಳಿಗೆ ಕಟ್ಟಡ ಕಾರ್ಮಿಕರ ನೋಂದಣಿ, ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು. ಬೋಗಸ್ ಕಾರ್ಡ್ ರದ್ದುಗೊಳಿಸಬೇಕು. ಸೆಸ್ ವಸೂಲಿ ಪ್ರಾಧಿಕಾರ ರಚಿಸಬೇಕು. ರಾಜ್ಯದಲ್ಲಿ ಈ ಹಿಂದೆ ನಿರ್ಮಿಸಿರುವ ಕಟ್ಟಡಗಳ ಎಲ್ಲಾ ಬಗೆಯ ಕಾಮಗಾರಿ ಮೌಲ್ಯಮಾಪನಗೊಳಿಸಲು ಅಧಿಕಾರಿಗಳ ತಂಡ ಕೂಡಲೇ ನೇಮಿಸಿ, ಶೇ 2ರಷ್ಟು ಬಡ್ಡಿಸಹಿತ ಸೆಸ್ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು, ಸಹಜ ಸಾವಿಗೆ 5 ಲಕ್ಷ ರೂ. ಪರಿಹಾರ, ಮಾಸಿಕ 5 ಸಾವಿರ ರೂ. ಪಿಂಚಣಿ, ಹೆರಿಗೆ ಭತ್ಯೆ 50 ಸಾವಿರ ರೂ., ವಿವಾಹಕ್ಕೆ ಸಹಾಯ ಧನವಾಗಿ 1 ಲಕ್ಷ ರೂ. ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.

ಸಂಘದ ಅಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷ ಕೆ.ಗೌಸ್‌ಪೀರ್, ಪದಾಧಿಕಾರಿಗಳಾದ ಡಿ.ಈಶ್ವರಪ್ಪ, ನರಸಿಂಹಸ್ವಾಮಿ, ನಾದಿಆಲಿ, ಇಮಾಮ್ ಮೊಹಿದ್ದೀನ್, ಚಾಂದ್‌ಪೀರ್, ಮಹಾಂತೇಶ್, ವೈ.ಬಸವರಾಜ್, ಸಲೀಂ, ಫೈರೋಜ್, ತಿಮ್ಮಯ್ಯ, ತಿಪ್ಪೇಸ್ವಾಮಿ, ರಾಜಣ್ಣ, ಪ್ರಸನ್ನ, ರಫಿ, ಗೌಸ್‌ಖಾನ್, ರಾಜಪ್ಪ, ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net