

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ನಿಯಮ ಉಲ್ಲಂಘಿಸಿ ಪೌರ ಕಾರ್ಮಿಕರನ್ನು ನೇಮಕ ಮಾಡಿದ್ದಲ್ಲದೆ ನೇರ ನೇಮಕಾತಿ ಮತ್ತು ತಾತ್ಕಾಲಿಕ ಆಯ್ಕೆಪಟ್ಟಿ ಸಿದ್ಧಪಡಿಸಿದ್ದನ್ನು ರದ್ದುಪಡಿಸಬೇಕು, ಅಕ್ರಮ ನಡೆಸುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯಿAದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆಯಲ್ಲಿ ೧೬೦೦ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಾವಿರ ಕಾರ್ಮಿಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಾಯಂ ನೌಕರಿಗಾಗಿ ಕೆಲ ವರ್ಷದ ಹಿಂದೆ ೩೨ ತಿಂಗಳು ಧರಣಿಯಲ್ಲಿ ತೊಡಗಿದ್ದ ಕಾರ್ಮಿಕರನ್ನು ನೇಮಕದಲ್ಲಿ ಪರಿಗಣಿಸಬೇಕು, ಅವರ ಬಾಕಿ ಇರುವ ೧೮ ಕೋಟಿ ವೇತನವನ್ನು ಕಾರ್ಮಿಕ ಇಲಾಖೆ ಆದೇಶಿಸಿದರೂ ನೀಡದೆ ಅನ್ಯಾಯ ಮಾಡುತ್ತಿದ್ದು, ಅದನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೋರ್ಟ್, ಸರ್ಕಾರದ ಆದೇಶವಿದ್ದರೂ ದಿನಗೂಲಿ ಇದ್ದವರಿಗೆ ಸಕ್ರಮವಾಗಿ ಇದ್ದವರಿಗೆ ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ವರ್ಷದಿಂದ ಪಾಲಿಕೆಯಲ್ಲೇ ಸೇವೆ ಸಲ್ಲಿಸುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪಾಲಿಕೆಯ ಕೆಲ ಭ್ರಷ್ಟ ಅಧಿಕಾರಿಗಳು ಸರ್ಕಾರದ ನಿಯಮ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪೌರಕಾರ್ಮಿಕ ಅಲ್ಲದವರ ತಾತ್ಕಾಲಿಕ ಕಾಯಂ ಆಯ್ಕೆಪಟ್ಟಿ ಅಂತಿಮಗೊಳಿಸಿದ್ದು, ಅದನ್ನು ಸ್ಥಗಿತಗೊಳಿಸಬೇಕು. ಜಿಲ್ಲಾಧಿಕಾರಿಗಳ ಸೂಚನೆಗೂ ಕಿಮ್ಮತ್ತು ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಸುನೀಲ ಮಾನ್ಪಡೆ, ಸೂರ್ಯಕಾಂತ ನಿಂಬಾಳಕರ, ಸೋಮಶೇಖರ ಬಂಗರಗಿ, ಶಿವಶರಣಪ್ಪ ಹೊಸಮನಿ, ತಿಮ್ಮಯ್ಯ ಭೋವಿ, ತುಕ್ಕಪ್ಪ, ಶಿವಶಂಕರ ಭೋವಿ, ಭಾರತಬಾಯಿ, ಇತರರಿದ್ದರು.