

ಮೈಸೂರು: ದೇಶಾದ್ಯಂತ ದುಡಿಯುವ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ವತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಸಂಘಟನೆಯ ಅಖಿಲ ಭಾರತ ಸಮಿತಿಯು ಪ್ರತಿಭಟನಾ ಸಪ್ತಾಹಕ್ಕೆ ಕರೆ ನೀಡಿದೆ. ಇದರ ಅಂಗವಾಗಿ ನಗರದಲ್ಲೂ ಹೋರಾಟ ನಡೆಯಿತು.
ಜಿಲ್ಲಾ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, ದೇಶದಲ್ಲಾಗಲಿ ಅಥವಾ ರಾಜ್ಯದಲ್ಲಿಯೇ ಆಗಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬಂಡವಾಳಶಾಹಿ ಮಾಲೀಕರ ಪರವಾದ ನೀತಿಗಳನ್ನು ಪೈಪೋಟಿಯ ಆಧಾರದಲ್ಲಿ ಜಾರಿಗೆ ತರುತ್ತಿವೆ.
ಕೇಂದ್ರ ಸರ್ಕಾರವು ಕಾರ್ಮಿಕರು ಹೋರಾಟ ಕಟ್ಟಿ ಗಳಿಸಿಕೊಂಡ ಕಾರ್ಮಿಕ ಕಾಯ್ದೆಗಳನ್ನು ರದ್ದುಮಾಡಿ, ಆದರ ಜಾಗದಲ್ಲಿ ಮಾಲೀಕರ ಪರವಾಗಿರುವ ಕಾರ್ಮಿಕ ಸಂಹಿತೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದಿಂದ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ನಡೆಸಿ ಬಂಡವಾಳಶಾಹಿಗಳಿಗೆ ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಅಗ್ಗವಾಗಿ ನೀಡಲಾಗುತ್ತಿದೆ. ಬಂಡವಾಳವನ್ನು ಹೂಡಿ ಸಂಪತ್ತು ಗಳಿಸಿ ಎನ್ನುತ್ತಿದೆ. ಆದರೆ, ಕಾರ್ಖಾನೆಗಳಿಗೆ ಭೂಮಿ ನೀಡಿದ ರೈತರಿಗಾಗಲಿ, ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡದೆ ಹೊರಗುತ್ತಿಗೆಯ ಹೆಸರಿನಲ್ಲಿ ಶೋಷಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಇವರೆಲ್ಲರೂ ಅಭಿವೃದ್ಧಿಯ ವಿರೋಧಿಗಳು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳಿಂದ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನ ಪರಿಷ್ಕರಿಸಿಲ್ಲ. 2016ರಲ್ಲಿ ಕನಿಷ್ಠ ವೇತನವನ್ನು ಕೇವಲ 1,000 ರೂ. ಹೆಚ್ಚಳ ಮಾಡಿದಾಗ, ಕೈಗಾರಿಕೆ ಮಾಲೀಕರು ಈ ಪರಿಷ್ಕರಣೆ ನಮಗೆ ಹೊರೆಯಾಗುತ್ತದೆ ಎಂದು ಕೋರ್ಟಿನ ಮೂಲಕ ತಡೆಯಾಜ್ಞೆ ತಂದರು. ಆದರೆ, ಇದೇ ಮಾಲೀಕರು ಈಗ ಕಾರ್ಮಿಕರಿಗೆ ದಿನಕ್ಕೆ 12 ಗಂಟೆ ದುಡಿಯಿರಿ, 15 ಗಂಟೆ ಕೆಲಸ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರಗಳು ಸಹ ಈ ಮಾತುಗಳಿಗೆ ಮೌನ ಸಮ್ಮತಿ ನೀಡುತ್ತಿವೆ ದೂರಿದರು.
ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸಿದ ಹೋರಾಟದ ಮಾದರಿಯಲ್ಲಿ ಬಲಿಷ್ಠವಾದ ಸಂಘಟಿತ ಹೋರಾಟವನ್ನು ನಡೆಸಿದರೆ ಎಂತಹ ಸರ್ಕಾರವನ್ನು ಬಗ್ಗಿಸಬಹುದು. ಈ ನಿಟ್ಟಿನಲ್ಲಿ ಹೋರಾಟವನ್ನು ಕಟ್ಟಬೇಕು ಎಂದು ಕರೆನೀಡಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷೆ ವಿ.ಯಶೋದರ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಬೆಲೆ ಏರಿಕೆಯಾಗುತ್ತಿದೆ. ಆದರೆ ಎಷ್ಟೇ ದುಡಿದರೂ ಸಂಬಳಗಳಾಗಲಿ, ಆದಾಯವಾಗಲಿ ಹೆಚ್ಚಳವಾಗುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರು, ಕಾರ್ಮಿಕರು, ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಇನ್ನೊಂದು ಕಡೆ ಶ್ರಮವನ್ನು ಶೋಷಿಸುವ ಬಂಡವಾಳಶಾಹಿಗಳ ಆಸ್ತಿ ಕೇವಲ ಐದು ವರ್ಷಗಳಲ್ಲಿ ದುಪ್ಪಟ್ಟಾಗುತ್ತಿದೆ. ಕಾರ್ಮಿಕರು ದನಿ ಎತ್ತದಂತೆ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಇಂತಹ ಸಂದರ್ಭದಲ್ಲಿ ದುಡಿಯುವ ಜನತೆಯ ಒಗ್ಗಟ್ಟನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಮುರಿಯಲು ಪ್ರಯತ್ನಿಸಲಾಗುತ್ತಿದೆ. ಇಂತಹ ತಂತ್ರಗಳನ್ನು ವಿಫಲಗೊಳಿಸಿ ಕಾರ್ಮಿಕರು ಏಕ ಹೋರಾಟವನ್ನು ಕಟ್ಟಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿಯ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಪುಟ್ಟರಾಜು, ಜಿಲ್ಲಾ ಸಮಿತಿಯ ಸದಸ್ಯರಾದ ಸಂಧ್ಯಾ, ಎಸ್.ಎಚ್.ಹರೀಶ್ , ಕಾರ್ಮಿಕರಾದ ರವಿಕುಮಾರ್, ರಮೇಶ್, ಮಹದೇವಸ್ವಾಮಿ, ನಾಗೇಂದ್ರ, ಆರವಿಂದ್, ಅಕ್ಕಮ್ಮ, ಮಹೇಶ್ ಸೇರಿದಂತೆ ಹಲವು ಕಾರ್ಖಾನೆಗಳ ಕಾರ್ಮಿಕರು, ಮೈಸೂರು ಮೆಡಿಕಲ್ ಕಾಲೇಜು ಕಾರ್ಮಿಕರು, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದರು.