

ಹುಕ್ಕೇರಿ, ಬೆಳಗಾವಿ: ರೈತರ ವಿಶ್ವಾಸ ಗಳಿಸಿರುವ ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಿ ದಿ.ಅಪ್ಪಣ್ಣಗೌಡರ ಕನಸನ್ನು ಸಾಕಾರಗೊಳಿಸುವಂತೆ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂಕೇಶ್ವರದ ಹಿರಾಶುಗರ್ಸ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 62ನೇ ಕಬ್ಬು ಅರೆಯುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಹಲವು ಸೌಲಭ್ಯಗಳನ್ನು ತಿಳಿದುಕೊಂಡು ಆಧುನಿಕ ವ್ಯವಸಾಯ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ರೈತರ ಆರ್ಥಿಕ ಬೆಳೆಯಾದ ಕಬ್ಬು ಬೆಳೆಗೆ ಯೋಗ್ಯ ದರ ನೀಡಲು ಸರ್ಕಾರ ಸಕ್ಕರೆ ಮಾರಾಟ ಹೆಚ್ಚಿಸಬೇಕು. ಆಗ ಮಾತ್ರ ರೈತರಿಗೆ ಹೆಚ್ಚಿನ ದರ ನೀಡಲು ಕಾರ್ಖಾನೆಗಳಿಗೆ ಸಹಕಾರಿಯಾಗುತ್ತದೆ. ಜತೆಗೆ ಕಾರ್ಖಾನೆ ಯಶಸ್ವಿಯಾಗಿ ನಡೆಯಲು ಕಾರ್ಮಿಕ ವರ್ಗದ ಶ್ರಮ ಕಾರಣವಾಗುತ್ತದೆ. ರೈತರ ಮತ್ತು ಕಾರ್ಖಾನೆಯ ಅಭ್ಯುದಯಕ್ಕೆ ಶ್ರಮಿಸುವ ಕಾರ್ಮಿಕರನ್ನು ಸದಾಕಾಲ ಸ್ಮರಿಸಿಕೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ಕಳೆದ ಹಂಗಾಮಿನಲ್ಲಿ 9.53 ಲಕ್ಷ ಮೆ.ಟನ್‌ಕ್ಕಿಂತ ಹೆಚ್ಚಿನ ಕಬ್ಬು ನುರಿಸಿ, 11.5 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿ, ಸರಾಸರಿ 11.59 ಇಳುವರಿ ಉಳಿಸಿಕೊಂಡಿದೆ. ಕಾರ್ಖಾನೆಯ ಈ ಸಾಧನೆಗೆ ಕಾರ್ಮಿಕರ ಶ್ರಮ ಮತ್ತು ಅಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿಯ ಪ್ರೋತ್ಸಾಹವೆ ಕಾರಣ. ಈ ವರ್ಷ ಸಹ ಅಂತಹ ಸಾಧನೆ ಮಾಡಲು ಆಡಳಿತ ಮಂಡಳಿ ಮತ್ತು ಕಾರ್ಮಿಕರು ಹಾಗೂ ರೈತರು ಸಂಘಟಿತರಾಗಿ ಶ್ರಮಿಸಬೇಕು ಎಂದರು.
ಪ್ರಾರಂಭದಲ್ಲಿ ಕಾರ್ಖಾನೆ ಅಧ್ಯಕ್ಷ ನಿಖಿಲ್ ಉಮೇಶ ಕತ್ತಿ ದಂಪತಿ ಹಾಗೂ ಹುನ್ನೂರ ವಿಠ್ಠರಾಯ ದೇವಸ್ಥಾನ ಪೂಜಾರಿ ದಂಪತಿಗಳು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ, ಕಬ್ಬು ಅರೆಯುವ ಹಂಗಾಮಿಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಶ್ರೀಶೈಲ ಮಗದುಮ್ಮ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಬೋಳೆ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ್ ಸನದಿ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಕಲಗೌಡ ಪಾಟೀಲ, ಪ್ರಶಾಂತ ಪಾಟೀಲ, ರಾಚಯ್ಯ ಹಿರೇಮಠ, ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಪವನ ಪಾಟೀಲ, ರಮೇಶ ಕುಲಕರ್ಣಿ, ಆನಂದ ಗಂಧ, ರಾಯಪ್ಪ ಡೂಗ, ಬಾಳಾಸಾಹೇಬ ನಾಯಿಕ, ಬಸಗೌಡ ಮಗೆನ್ನವರ, ಗಜಾನನ ಕ್ವಳ್ಳಿ, ಶ್ರೀಕಾಂತ ಹತನೂರೆ, ಅಮರ ನಲವಡೆ, ಸುನೀಲ ಪರ್ವತರಾವ, ಸುಭಾಷ ಪಾಟೀಲ, ವಿಜಯ ಶೇರೇಕರ ಇತರರಿದ್ದರು.