

ಬಣಕಲ್: ಕಾಫಿ ಬೆಳೆಗಾರರು ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಆಧಾರ್ ಕಾರ್ಡ್, ಸದಸ್ಯರ ಸಂಪೂರ್ಣ ಮಾಹಿತಿ ಕಲೆ ಹಾಕಿ ವಿವರವನ್ನು ಪೊಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಎಸ್‌ಐ ಡಿ.ವಿ.ರೇಣುಕಾ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ರಕ್ಷಣೆ ಬೆಳೆಗಾರರ ಜವಾಬ್ದಾರಿ. ಈಗ ಹೆಚ್ಚು ಕಳವು ಪ್ರಕರಣಗಳು ದಾಖಲಾಗುತ್ತಿವೆ. ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯೂ ಇದೆ. ಹಾಗೆಯೇ ವಲಸೆ ಬರುವ ಅಸ್ಸಾಂ ಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಕಾರ್ಮಿಕರು ಕಳವು ಮಾಡಿದ ಕಾಫಿ, ಕಾಳುಮೆಣಸನ್ನು ವ್ಯಾಪಾರಿಗಳು ಖರೀದಿ ಮಾಡಬಾರದು. ಬೆಳೆಗಾರರು ಕಾಫಿ, ಕಾಳುಮೆಣಸು ಗೋದಾಮುಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಬೆಳೆಗಾರರು, ವ್ಯಾಪಾರಿಗಳು ಹೆಚ್ಚು ಹಣ, ಚಿನ್ನಾಭರಣವನ್ನು ಮನೆ, ಅಂಗಡಿಗಳಲ್ಲಿ ಇಡಬಾರದು. ಬ್ಯಾಂಕ್ ಲಾಕರ್‌ಗಳಲ್ಲಿ ಇಡಬೇಕು. ತೋಟಗಳಿಗೆ ಹೊರಗಿನಿಂದ ಕಾರ್ಮಿಕರನ್ನು ಕೆಲಸಕ್ಕೆ ಕರೆತರುವ ವಾಹನಗಳಿಗೆ ವಿಮೆ ಮತ್ತಿತರ ದಾಖಲೆಯಿದೆಯೇ ಎಂದು ಪರಿಶೀಲಿಸಬೇಕು. ಠಾಣೆಗಳಿಗೆ ಕಾರ್ಮಿಕರ ಮಾಹಿತಿ ನೀಡದಿದ್ದರೆ ಯಾವುದೇ ಅನಾಹುತಗಳಿಗೆ ತೋಟದ ಮಾಲೀಕರನ್ನೇ ಹೊಣೆ ಮಾಡಲಾಗುವುದು. ಎಲ್ಲ ಅಪರಾಧ ತಡೆಗಟ್ಟಲು ಬೆಳೆಗಾರರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಕಾಫಿ ತೋಟಗಳಲ್ಲಿ ಫೈಬರ್ ಏಣಿಗಳನ್ನು ಬಳಸಿದರೆ ಕಾರ್ಮಿಕರ ಸಾವು ತಪ್ಪಿಸಬಹುದು. ಚಾಲಕರು ವಾಹನ ಚಲಾಯಿಸುವಾಗ ಸೂಕ್ತ ದಾಖಲೆ ಇರಿಸಿಕೊಳ್ಳಬೇಕು ಎಂದರು. ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಸಂಜಯ್ ಗೌಡ, ಬಿ.ಎಂ.ಆದರ್ಶ್, ಬಿ.ಎಸ್.ವಿಕ್ರಂ, ಬಿ.ಬಿ.ರಮೇಶ್, ಟಿ.ಎಂ.ಗಜೇಂದ್ರ, ಬಿ.ಸಿ.ಪ್ರವೀಣ್, ಬಿ.ಎಲ್.ದಿನೇಶ್, ಬಾಳೂರು ಮೋಹನ್, ಹೆಗ್ಗುಡ್ಲು ಪ್ರಸನ್ನ, ಯತೀಶ್, ಸಮಾಜ ಸೇವಕ ಮೊಹಮ್ಮದ್ ಆರ್ೀ ಇತರರಿದ್ದರು.