ಕಾರ್ಮಿಕರ ಮೇಲೆ ನಿಲ್ಲದ ಶೋಷಣೆ: ಎಸ್‌ಡಿಪಿಐ ರಾಜ್ಯ ಘಟಕ ಅಧ್ಯಕ್ಷ ಅಬ್ದುಲ್ ಮಜೀದ್ ಬೇಸರ

mysore
Published on

ಮೈಸೂರು: ಭಾರತದಲ್ಲಿ ಕಾರ್ಮಿಕ ವಲಯವು ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಕ್ಷೇತ್ರವಾಗಿದೆ. ಕಾರ್ಮಿಕರ ಸ್ಥಿತಿಗತಿಯ ಸುಧಾರಣೆಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಬ್ದುಲ್ ಮಜೀದ್ ಆಗ್ರಹಿಸಿದರು.

ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯುನಿಯನ್ (ಎಸ್‌ಡಿಟಿಯು) ಜಿಲ್ಲಾ ಸಮಿತಿ ವತಿಯಿಂದ ನಗರದ ಹೋಟೆಲ್‌ವೊಂದರಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮತನಾಡಿದರು.

ದೇಶದ ಆರ್ಥಿಕ ಬೆಳವಣಿಗೆಯ ಬೆನ್ನೆಲುಬಾಗಿರುವ ಕಾರ್ಮಿಕ ವರ್ಗದ ಮೇಲೆ ಇನ್ನೂ ಶೋಷಣೆ ನಡೆಯುತ್ತಿದ್ದು, ಇದು ತಕ್ಷಣ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯ ಕಾರ್ಮಿಕ ಅಧಿಕಾರಿ ಎಂ.ಸಿ.ಮಾದಪ್ಪ ಅವರು ಕಾರ್ಮಿಕರಿಗಾಗಿ ಇರುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯವಿದೆ. ದೇಶದ ಕಾರ್ಮಿಕರನ್ನು ಬಲಿಷ್ಠಗೊಳಿಸಲು ಪರಿಣಾಮಕಾರಿ ವ್ಯವಸ್ಥೆಗಳ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಎಸ್‌ಡಿಟಿಯು ಮೈಸೂರು ಜಿಲ್ಲಾ ಅಧ್ಯಕ್ಷ ಅಲ್ತಾಫ್ ಅಹಮದ್ ಸಂಘದ ಇತ್ತೀಚಿನ ಚಟುವಟಿಕೆಗಳ ಹಾಗೂ ಸಾಧನೆಗಳ ವಿವರ ಮಂಡಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಶಯಿಖ್ ಅವರು ಎಸ್‌ಡಿಟಿಯು ಸಂಘಟನೆಯ ಭವಿಷ್ಯದ ಸಂಘಟನಾ ನೀಲನಕ್ಷೆಯನ್ನು ವಿವರಿಸಿದರು. ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವಕೀಲ ಕಲೀಮ್, ಈಡನ್ ನ್ಯೂಸ್‌ನ ಸಿಇಒ ವಿರೇಶ್, ಸಮಾಜಸೇವಕ ರವೀಂದ್ರ, ಎಸ್‌ಡಿಟಿಯು ಜಿಲ್ಲಾ ಉಪಾಧ್ಯಕ್ಷ ಅಮೀನ್ ಸೇಠ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net