ಕಾರ್ಮಿಕರ ಮಾಹಿತಿ ಪೊಲೀಸರಿಗೆ ನೀಡಿ

MDG meetings
ಬಾಳೂರು ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರ ಸಭೆ ನಡೆಯಿತು. ಪಿಎಸ್‌ಐ ದಿಲೀಪ್‌ಕುಮಾರ್, ಬಿ.ಆರ್.ಬಾಲಕೃಷ್ಣ, ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಮಹೇಂದ್ರ, ಶಶಿಧರ್, ಸತೀಶ್, ಶರಣು ಪಟೇಲ್ ಇತರರಿದ್ದರು.
Published on

ಮೂಡಿಗೆರೆ: ಹೊರ ರಾಜ್ಯದ ವಲಸೆ ಕಾರ್ಮಿಕರ ಬಗ್ಗೆ ಕಾಫಿ ತೋಟದ ಮಾಲೀಕರು ಸಂಪೂರ್ಣ ಮಾಹಿತಿ ಪಡೆದು ಪೊಲೀಸರಿಗೆ ನೀಡಿದಲ್ಲಿ ಕಾನೂನು ಉಲ್ಲಂಘನೆಯಂತಹ ಪ್ರಕರಣವನ್ನು ತಡೆಗಟ್ಟಬಹುದಾಗಿದೆ ಎಂದು ಬಾಳೂರು ಪಿಎಸ್‌ಐ ದಿಲೀಪ್‌ಕುಮಾರ್ ಹೇಳಿದರು.

ಬಾಳೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ವಲಸೆ ಕಾರ್ಮಿಕರನ್ನು ತೋಟದ ಕೆಲಸಕ್ಕೆ ನೇಮಿಸುವ ಮುನ್ನ ಅವರ ಪೂರ್ವಾಪರ ವಿಚಾರಿಸಿ ಆಧಾರ್ ಕಾರ್ಡ್ ಇತರ ಮಾಹಿತಿ ಪಡೆದುಕೊಳ್ಳಬೇಕು. ಕಾರ್ಮಿಕರ ಸಂಖ್ಯೆಯನ್ನು ದಾಖಲೆಯಾಗಿ ಸಂಗ್ರಹಿಸಿಡಬೇಕು. ಅಸ್ಸಾಂ, ಪಶ್ಚಿಮ ಬಂಗಾಳದ ಕಾರ್ಮಿಕರು ಮಾತ್ರವಲ್ಲದೆ ಬಾಂಗ್ಲಾದೇಶದ ನುಸುಳುಕೋರರು ನಕಲಿ ಆಧಾರ್‌ ಮಾಡಿಸಿದ್ದಾರೆಂಬ ಮಾಹಿತಿಯಿದೆ. ಕಾರ್ಮಿಕರ ಸೋಗಿನಲ್ಲಿರುವವರನ್ನು ಪತ್ತೆ ಹಚ್ಚಬೇಕು. ಅವರಿಂದ ಕೃತ್ಯಗಳು ನಡೆಯದಂತೆ ತಪ್ಪಿಸಲು ತೋಟದ ಮಾಲೀಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಅಪರಿಚಿತ ಗುಂಪಿನಿಂದ ಮಹಿಳೆಯರ ಮೇಲೆ ದೌರ್ಜನ್ಯ, ಪೋಕ್ಸೋ ಪ್ರಕರಣ, ಕಳವು ಪ್ರಕರಣಗಳು ನಡೆಯುತ್ತಿರುವುದು ಕಂಡು ಬಂದಿದೆ. ಮಲೆನಾಡಿನ ಕಾಫಿ ತೋಟಕ್ಕೆ ವಲಸೆ ಬಂದಿರುವ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೊಸಹಳ್ಳಿಯಲ್ಲಿ ಪರಿಚಿತರು ಒಂಟಿ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ದರೋಡೆ ನಡೆಸಿ ಪರಾರಿಯಾಗಿದ್ದರು. ಇಂತಹ ಕೃತ್ಯಗಳು ಮರುಕಳಿಸದಂತೆ ಜಾಗೃತರಾಗಲು ಸರಕು ತುಂಬಿರುವ ಗೋದಾಮು, ವ್ಯಾಪಾರ ಕೇಂದ್ರ ಮತ್ತು ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಇದರಿಂದ ಕಳ್ಳರ ಜಾಡು ಹಿಡಿಯಲು ಸುಲಭವಾಗುತ್ತದೆ ಎಂದು ತಿಳಿಸಿದರು.

ಅಸ್ಸಾಂ ರಾಜ್ಯದಿಂದ ಮಾತ್ರವಲ್ಲ. ನಮ್ಮ ರಾಜ್ಯದ ದಾವಣಗೆರೆ, ಹಡಗಲಿ ಮತ್ತಿತರ ಜಿಲ್ಲೆಗಳಿಂದ ವಲಸೆ ಕೂಲಿ ಕಾರ್ಮಿಕರು ಬರುತ್ತಿದ್ದಾರೆ. ಅವರ ವಿಳಾಸ ಮತ್ತು ಮಾಹಿತಿಯನ್ನು ಪ್ರತಿ ತೋಟದ ಮಾಲೀಕರು ಲಿಖಿತ ರೂಪದಲ್ಲಿ ದಾಖಲೆ ಸಹಿತವಾಗಿ ಪಡೆಯಬೇಕು. ಅಲ್ಲದೆ ಎಲ್ಲಾ ಕಾಫಿ ತೋಟದ ಮಾಲೀಕರು ಕಡ್ಡಾಯವಾಗಿ ಕಾರ್ಮಿಕ ವಿಮೆ ಮಾಡಿಸಿಕೊಳ್ಳಬೇಕು. ಕೂಲಿಲೈನ್ ಹಾಗೂ ಬಂಗಲೆ, ಗೋದಾಮಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಕಾರ್ಮಿಕರನ್ನು ಸಾಗಿಸುವ ವಾಹನಗಳ ದಾಖಲೆ ಸರಿ ಇದೆಯಾ ಎಂದು ಪರಿಶೀಲಿಸಿಕೊಳ್ಳಬೇಕು. ಇಂತಹ ಸೂಕ್ಷ್ಮ ವಿಚಾರಗಳಿಂದಾಗಿ ಕೆಲ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದಾಗ ತೋಟದ ಮಾಲೀಕರಿಗೆ ಅನುಕೂಲವಾಗುತ್ತದೆ. ಕಾಫಿ ಬೆಳೆಗಾರರು ತೋಟಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರ ಪೈಕಿ ಅವಿವಾಹಿತ ಯುವತಿಯರಿದ್ದರೆ ಅವರನ್ನು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿದರೆ ಪೋಕ್ಸೋದಂಥ ಗಂಭೀರ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ವಕೀಲ ಪರೀಕ್ಷಿತ್ ಜಾವಳಿ, ಕಲ್ಮನೆ ಮಹೇಂದ್ರ, ಶಶಿಧರ್, ಸತೀಶ್, ಶರಣು ಪಟೇಲ್, ಸುರೇಶ್, ಪೀಟರ್ ಡಿಸೋಜ, ಮಹೇಶ್, ರವಿ ಸುಂಕಸಾಲೆ, ಎಎಸ್‌ಐ ನಾಗರಾಜ್, ಅನಿಲ್, ಮನು, ಸಮ್ಮಿನ್, ವಸಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net