

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ, ಅವರ ಅವಲಂಬಿತರ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ರಾಜ್ಯ ಸರ್ಕಾರ ರಾಜ್ಯಕಟ್ಟಡ ಮ ತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಅನುಷ್ಠಾನಗೊಳಿಸುತ್ತಿರುವ ಸಂಚಾರಿ ಆರೋಗ್ಯ ಕ್ಲಿನಿಕ್‌ಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 8 ರಿಂದ ಕಾರ್ಯಾರಂಭವಾಗಲಿವೆ.
ತಲಾ ಎರಡು ತಾಲೂಕುಗಳಿಗೆ ಒಂದರಂತೆ ಜಿಲ್ಲೆಗೆ 3 ಸಂಚಾರಿ ಆರೋಗ್ಯ ಕ್ಲಿನಿಕ್‌ಗಳು ಮಂಜೂರಾಗಿವೆ. ಸದ್ಯಕ್ಕೆ ಎರಡು ಮೊಬೈಲ್ ಕ್ಲಿನಿಕ್‌ಗಳು ಜಿಲ್ಲೆಗೆ ಬಂದಿವೆ. ಕಾರ್ಮಿಕರು, ಅವಲಂಬಿತರ ಆರೋಗ್ಯ ರಕ್ಷಣೆಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಾದ್ಯಂತ 100 ಮೊಬೈಲ್ ಕ್ಲಿನಿಕ್‌ಗಳ ಯೋಜನೆ ಅನುಷ್ಠಾನಗೊಳಿಸುವುದಾಗಿ ರಾಜ್ಯಸರ್ಕಾರ ಹೇಳಿತ್ತು. ಕಳೆದ ಮಾರ್ಚ್ 3ರಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಲ್ಲಿ ಈ ಘಟಕಗಳ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಏಪ್ರಿಲ್ 1ರಿಂದ ರಾಜ್ಯಾದ್ಯಂತ ಈ ಘಟಕಗಳು ಕಾರ‌್ಯಾರಂಭ ಮಾಡಲಿವೆ ಎಂದು ಸರ್ಕಾರ ತಿಳಿಸಿತು.
ಜಿಪಿಎಸ್ ಆಧರಿತ ವಾಹನಗಳು: ಎಸ್‌ಒಪಿಯಂತೆ ಜಿಪಿಎಸ್ ಆಧರಿತ, ಬಯೋಮೆಟ್ರಿಕ್ ಹಾಜರಾತಿಯೊಂದಿಗೆ ರೂಟ್‌ಮ್ಯಾಪ್ ನಂತೆ ನಿಗದಿತ ಸ್ಥಳಗಳಲ್ಲಿ, ಕನಿಷ್ಠ 4 ತಾಸು ಸುಸಜ್ಜಿತ ಈ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸಬೇಕಿದೆ. ಈ ಘಟಕದಲ್ಲಿ 25 ವೈದ್ಯಕೀಯ ಉಪಕರಣಗಳು, ವಿವಿಧ 5 ಪ್ರಯೋಗಾಲಯಗಳು ಹಾಗೂ 37 ಬಗೆಯ ವೈದ್ಯಕೀಯ ಬಳಕೆ ವಸ್ತುಗಳು ಇರುತ್ತವೆ.
ಒಬ್ಬ ವೈದ್ಯಕೀಯ ಅಧಿಕಾರಿ ಒಳಗೊಂಡಂತೆ ಘಟಕದಲ್ಲಿ ಆರು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ ನಿದೇರ್ಶನದಂತೆ ಈ ಎಲ್ಲ ಸಿಬ್ಬಂದಿ ರಾಜ್ಯಾದ್ಯಂತ ಏಕರೂಪದ ವಸ್ತ್ರ ಸಂಹಿತೆ ಪಾಲಿಸಬೇಕಿದೆ. ಮಂಡಳಿ ಇವುಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಏಜನ್ಸಿಗಳಿಗೆ ವಹಿಸಿದೆ.
ಪ್ರತಿ ತಿಂಗಳು 25 ಕೆಲಸದ ದಿನಗಳೆಂದು ಪರಿಗಣಿಸಿ ಸರಾಸರಿ 50 ಕಾರ್ಮಿಕರು ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಗುರಿ ನೀಡಲಾಗಿದೆ. ನೋಂದಾಯಿತರಲ್ಲದ ಕಾರ್ಮಿಕರು ಬಂದರೆ ಅವರ ನೋಂದಣಿಗೂ ಕಾರ್ಮಿಕ ಇಲಾಖೆ ಅಧಿಕಾರಿ ಗಳು ತಕ್ಷಣ ಮುಂದಾಗಬೇಕಿದೆ. ಘಟಕಗಳ ನಿರ್ವಹಣೆ ಮೇಲ್ವಿಚಾರಣೆ ಜವಾಬ್ದಾರಿ ಇರುವಂಥ ಇಲಾಖೆ ಅಧಿಕಾರಿಗಳು ವಾಹನ ಸಂಚ ರಿಸಿದ ವಿವರ, ಚಿಕಿತ್ಸೆ ಪಡೆದ ಕಾರ್ಮಿಕರ ವಿವರ ಹಾಗೂ ನೋಂದಣಿ ಸಂಖ್ಯೆ ಪರಿಶೀಲಿಸಬಹುದಾಗಿದೆ.
ಯಾವ ಜಿಲ್ಲೆಗೆ ಎಷ್ಟು ಘಟಕಗಳು?
ಬೆಳಗಾವಿ ಜಿಲ್ಲೆಗೆ 6 ಘಟಕಗಳು, ಧಾರವಾಡ 4, ಹಾವೇರಿ 2, ಗದಗ 2, ವಿಜಯಪುರ 3, ಬಾಗಲಕೋಟೆ 3, ಉತ್ತರ ಕನ್ನಡ 3, ಹಾಸನ 3, ಚಿಕ್ಕಮಗಳೂರು 2, ಕೊಡಗು 1, ಉಡುಪಿ 2, ದಕ್ಷಿಣ ಕನ್ನಡ 3, ಶಿವಮೊಗ್ಗ 3, ಕೊಪ್ಪಳ 2, ರಾಯಚೂರು 3, ಬೀದರ್ 3, ಯಾದಗಿರಿ 3, ಬಳ್ಳಾರಿ 3, ವಿಜಯನಗರ 2, ಕಲಬುರಗಿ 5, ಚಿತ್ರದುರ್ಗ 3, ದಾವಣಗೆರೆ 3, ತುಮಕೂರು 4, ರಾಮನಗರ 2, ಬೆಂಗಳೂರು ನಗರ 12, ಕೋಲಾರ 3, ಚಿಕ್ಕಬಳ್ಳಾಪುರ 2, ಚಾಮರಾಜನಗರ 2, ಬೆಂಗಳೂರು ಗ್ರಾಮಾಂತರ 4, ಮಂಡ್ಯ 3 ಹಾಗೂ ಮೈಸೂರು ಜಿಲ್ಲೆಗೆ 4 ಘಟಕಗಳು ಮಂಜೂರಾಗಿವೆ.
--
ಕೋಟ್
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಸಂ ಚಾರಿ ಆರೋಗ್ಯ ಘಟಕಗಳು ಜಿಲ್ಲೆಗೂ ಮಂಜೂರಾಗಿವೆ. ಇವುಗಳಿಗೆ ಮೇ 8ರಂದು ಬೆಳಗ್ಗೆ 11ಗಂಟೆಗೆ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಲಿದ್ದಾರೆ.
ಅನಿಲ ಬಾಲಚಂದ್ರ ಬಗಟಿ, ಕಾರ್ಮಿಕ ಅಧಿಕಾರಿ, ಚಿತ್ರದುರ್ಗ
---