

ಬೀದರ್: ಕೇಂದ್ರದ ಕಾರ್ಮಿಕ, ರೈತ, ಆರ್ಥಿಕತೆ ವಿರೋಧಿ ಹಾಗೂ ಕಾರ್ಪೋರೇಟ್ ಪರ ನೀತಿ ಖಂಡಿಸಿ ಕರೆ ನೀಡಿದ ಭಾರತ್ ಬಂದ್‌ಗೆ ಬೆಂಬಲಿಸಿ ಬುಧವಾರ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಕಾರ್ಮಿಕ ಸಂಘಟನೆಗಳು ಜಂಟಿ ಸಮಿತಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿದ ಪ್ರಮುಖರು, ನರೇಂದ್ರ ಮೋದಿ ಸರ್ಕಾರ ಬಂಡವಾಳ ಮತ್ತು ಕಾರ್ಪೋರೇಟ್ ಮನೆತನದ ಒತ್ತಡಕ್ಕೆ ಮಣಿದು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕೆಲಸದ ಅವಧಿಯನ್ನು ಎಂಟು ಗಂಟೆ ಬದಲು ೧೦ ಗಂಟೆಗೆ ಹೆಚ್ಚಿಸಲಾಗಿದೆ. ಕರ್ನಾಟಕ ಸರ್ಕಾರ ಸಹ ಕೇಂದ್ರದ ಹಾದಿಯಲ್ಲೇ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸಾರ್ವತ್ರಿಕ ವಲಯದ ಕೈಗಾರಿಕೆ ಸ್ಥಾಪಿಸಿದ್ದರು. ಆದರೆ ಈಗಿನ ಪ್ರಧಾನಿ ಮೋದಿ ಈ ವಲಯಗಳನ್ನು ಮಾರಾಟಕ್ಕೆ ತೆಗೆದಿದ್ದಾರೆ. ರೈಲ್ವೆ, ಎಲ್‌ಐಸಿ ಖಾಸಗೀಕರಣಕ್ಕೆ ತಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಖಾಸಗಿ ಬ್ಯಾಂಕ್‌ಗಳಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಳಿಂದ ಪಡೆದ ಕಾರ್ಮಿಕ ಹಕ್ಕುಗಳನ್ನು ರದ್ದುಪಡಿಸಲಾಗುತ್ತಿದೆ. ಕಾರ್ಮಿಕ ಚಳವಳಿ ತಡೆಗಟ್ಟಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತಂದು ಪ್ರಜಾಪ್ರಭುತ್ವದ ಹಕ್ಕು ಕಸಿದುಕೊಳ್ಳುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರ ಸೇವೆ ಕಾಯಂಗೊಳಿಸುವಂತೆ ಹಲವು ಬಾರಿ ಹೋರಾಟ ಮಾಡಿದರೂ ಕ್ರಮ ಕೈಗೊಂಡಿಲ್ಲ. ಈ ನೌಕರರ ಗೌರವಧನವನ್ನು ೨೫ ಸಾವಿರ ರೂ.ಗೆ ಹೆಚ್ಚಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಎಲ್ಲ ರೀತಿಯ ಸಾಮಾಜಿಕ ಭದ್ರತೆ ಒದಗಿಸಬೇಕು. ಕೃಷಿ ಕಾರ್ಮಿಕರಿಗಾಗಿ ಕಲ್ಯಾಣ ಮಂಡಳಿ ರಚಿಸಿ ಕೆಲಸದ ಅವಧಿ ೮ ಗಂಟೆಗೆ ನಿಗದಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಬಾಬುರಾವ ಹೊನ್ನಾ, ಸಹ ಸಂಚಾಲಕ ಆರ್.ಪಿ. ರಾಜಾ, ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ನಜೀರ್ ಅಹ್ಮದ್, ಮಹೇಶ ನಾಡಗೌಡ, ಎಂ.ಡಿ. ಶಾಯತ್ ಅಲಿ ಇತರರಿದ್ದರು.
ಬಿಎಸ್‌ಎಸ್‌ಕೆ ಪುನಃ ಆರಂಭಿಸಿ: ಜಿಲ್ಲೆಯ ರೈತರ ಜೀವನಾಡಿಯಾದ ಹಳ್ಳಿಖೇಡ್(ಬಿ) ಸಮೀಪದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ)ಯನ್ನು ಪುನಃ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾರ್ಖಾನೆ ಆಡಳಿತ ಮಂಡಳಿ ರದ್ದುಪಡಿಸಿ ಕೂಡಲೇ ಆಡಳಿತಾಧಿಕಾರಿ ನೇಮಿಸಿ ರೈತರ ಹಿತ ಕಾಪಾಡಬೇಕು. ಕಾರ್ಖಾನೆ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕು ಎಂದು ಸಿಎಂ ಅವರಿಗೆ ಬರೆದ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ. ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ಹಲವು ಹಳ್ಳಿ ರೈತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಭೂಮಿ ಕಳೆದುಕೊಂಡವರಿಗೆ ಇಂದಿನ ಮಾರುಕಟ್ಟೆ ಬೆಲೆಯಂತೆ ಪರಿಹಾರ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.