

ಕಂಪ್ಲಿ: ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸದೆ ಎಂಟು ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಉದ್ಯೋಗಳನ್ನು ಕಡಿತಗೊಳಿಸುವುದು, ಕಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ಹುನ್ನಾರ ಕೈಬಿಡಬೇಕು. ಕೆಲಸಕ್ಕೆ ತಕ್ಕ ವೇತನ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕುಗಳನ್ನು ಮೊಟಕುಗೊಳಿಸಬಾರದು. ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಮಹಿಳಾ ನೌಕರರಿಗೆ 36 ಸಾವಿರ ರೂ. ವೇತನ ನಿಗದಿಪಡಿಸಬೇಕು. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಹುದ್ದೆ ಖಾಲಿ ಇದ್ದು, ಭರ್ತಿಯಾಗದ ಹಿನ್ನೆಲೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ನೌಕರರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ನೌಕರರನ್ನು ಕಡಿಮೆ ವೇತನದ ಮೇಲೆ ದುಡಿಸಿಕೊಳ್ಳುವ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದರು.
ವಿದ್ಯಾರ್ಥಿ ಸಂಘಟನೆ ರಾಜ್ಯ ಕಾರ್ಯದರ್ಶಿ ದುರುಗೇಶ್, ಪದಾಧಿಕಾರಿಗಳಾದ ಬಂಡಿ ಬಸವರಾಜ, ಐ.ಹೊನ್ನೂರಸಾಬ್, ಆರ್.ನಾಗರಾಜ, ಚಾಂದ್ ಬಾಷ, ನೆಲ್ಲೂಡಿ ರಾಜ, ತಿಪ್ಪಮ್ಮ, ಉಮಾದೇವಿ, ಅನುರಾಧ, ಮಾರುತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು, ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಉದ್ಭವ ಗಣಪತಿ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಯಿತು. ಶಿರಸ್ತೇದಾರ್ ಎಸ್.ಡಿ.ರಮೇಶ್‌ಗೆ ಮನವಿ ಸಲ್ಲಿಸಿದರು.