

ಅರಕಲಗೂಡು: ಕಾರ್ಮಿಕ ವರ್ಗದವರಿಗೆ ಸರ್ಕಾರದ ಸವಲತ್ತುಗಳು ವಿಪುಲವಾಗಿದ್ದು ಅಧಿಕಾರಿಗಳು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಎ. ಮಂಜು ತಾಕೀತು ಮಾಡಿದರು.
ಪಟ್ಟಣದ ದೇವರಾಜು ಅರಸು ಭವನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಶುಕ್ರವಾರ ಅಸಂಘಟಿತ ವರ್ಗದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಗಳ ಹಾಗೂ ಕಾರ್ಮಿಕ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಏಳು ಸಾವಿರಕ್ಕಿಂತ ಅಧಿಕ ಕಾರ್ಮಿಕರಿದ್ದು ಸರ್ಕಾರದ ಸವಲತ್ತುಗಳು ತಲುಪಬೇಕು. ಸೌಕರ್ಯಗಳನ್ನು ಪಡೆದುಕೊಂಡವರು ಇತರರಿಗೂ ಮಾಹಿತಿ ನೀಡಬೇಕು. ಸೌಲಭ್ಯಗಳಿಂದ ವಂಚಿತರಾದವರನ್ನು ಅಧಿಕಾರಿಗಳು ಗುರುತಿಸಿ ಒದಗಿಸಬೇಕು. ೬೦ ವರ್ಷ ತುಂಬಿದ ಕಾರ್ಮಿಕ ವರ್ಗದ ಪಾಲಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದರು.
ರೈತರು ಇಂದು ಐದು ಎಕರೆಯಷ್ಟು ತೋಟ ಹೊಂದಿದ್ದರೂ ಅವರ ಗಂಡು ಮಕ್ಕಳಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ದುಡಿಯುವ ಕಾರ್ಮಿಕ ವರ್ಗದವರಿಗೆ ಆರ್ಥಿಕವಾಗಿ ಸಬಲರಾಗುವ ಶಕ್ತಿ ಇದೆ. ಹೀಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೇಶ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಯಮುನ, ಕೆನರಾ ಬ್ಯಾಂಕ್ ಅಧಿಕಾರಿ ಲತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಬಿ. ಉಳ್ಳಾಗಡ್ಡಿ, ಹಿರಿಯ ಕಾರ್ಮಿಕ ನಿರೀಕ್ಷಕ ಎಸ್. ವಿಜಯ್ ಕುಮಾರ್, ಕಾರ್ಮಿಕ ನಿರೀಕ್ಷಕ ಎಚ್.ಪಿ. ರಘು ಇದ್ದರು. ಕಾರ್ಮಿಕರಿಗೆ ಕಿಟ್ ಬ್ಯಾಗ್ ಗಳನ್ನು ವಿತರಿಸಲಾಯಿತು.