ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿಕಾಡಾನೆ ದಾಳಿ

ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿಕಾಡಾನೆ ದಾಳಿ
Published on

ಹಾಸನ: ಮಲೆನಾಡಿನಲ್ಲಿ ಕಾಡಾನೆ ಮನುಷ್ಯರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಪಟಳ ಹೆಚ್ಚುತ್ತಿದ್ದು, ಭಾನುವಾರ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದ್ರಾಕ್ಷಾಯಿಣಿ (60) ಗಾಯಾಳು. ಸಕಲೇಶಪುರ
ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದ ಪುಟ್ಟಸ್ವಾಮಿಗೌಡ ಎಂಬುವರ ಕಾಫಿ ತೋಟಕ್ಕೆ ಕೂಲಿಗೆ ಬಂದಿದ್ದ ದ್ರಾಕ್ಷಾಯಿಣಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಾನೆ, ಮಹಿಳೆಯನ್ನು ಸೊಂಡಲಿನಿಂದ ಹಿಡಿದು ಎಸೆದಿದೆ. ಅದೃಷ್ಟವಷತ್ ಪ್ರಾಣಾಪಾಯದಿಂದ ಪಾರಾಗಿ, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಉಪ ವಲಯ ಅರಣ್ಯಧಿಕಾರಿ ಮಹದೇವ್, ದಿನೇಶ್ ಅವರು ಭೇಟಿ ನೀಡಿ, ಮಹಿಳೆಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.
ಬೇಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ದಿನ ಬಿಟ್ಟು ದಿನ ಒಬ್ಬರಲ್ಲ ಒಬ್ಬರು ಕಾಡಾನೆ ದಾಳಿಗೆ ತುತ್ತಾಗುತ್ತಿದ್ದಾರೆ. ಶುಕ್ರವಾರವಷ್ಟೇ ಬೆಳಂಬೆಳಿಗ್ಗೆ ಅರೇಹಳ್ಳಿ ಸಮೀಪ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸೆಕ್ಯೂರಿಟಿ ಗಾಡ್ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಆತನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ನಿತ್ಯವೂ ಕಾಡಾನೆಗಳು ಉಪಟಳ ನೀಡುತ್ತಿದ್ದು, ತೋಟಗಳಲ್ಲಿ ಕೆಲಸ ನಿರ್ವಹಿಸಲು, ಹಲಗಲಿನ ವೇಳೆಯಲ್ಲೂ ರಸ್ತೆಯಲ್ಲಿ ಸಂಚರಿಸಲು ಬೈಕ್ ಸವಾರರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿದರು ಸ್ಥಳಾಂತರಿಸುವಂತೆ ನಿರಂತರವಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ, ಕ್ರಮ ತೆಗೆದುಕೊಳ್ಳದ ಅರಣ್ಯ ಇಲಾಖೆ ಹಾಗು ಸರ್ಕಾರ ಕಾಡಾನೆ ದಾಳಿಯಿಂದ ಯಾರಾದರೂ ಮೃತಪಟ್ಟಾಗ ಜನರ ಕಣ್ಣೋರೆಸಲು ಕಾರ್ಯಾಚರಣೆ ನಡೆಸಿ ಒಂದೆರೆಡು ಪುಂಡಾನೆ ಸೆರೆ ಹಿಡಿದು ಅರ್ಧಕ್ಕೆ ನಿಲ್ಲಿಸಿ ಸುಮ್ಮನಾಗುತ್ತಾರೆ. ಮುಂಗಾರು ಆರಂಭಗೊಳ್ಳುತ್ತಿದ್ದು ರೈತರು, ತೋಟ-ಗದ್ದೆಗಳಿಗೆ ಓಡಾಡುವುದರಿಂದ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net