ಕಾರ್ಮಿಕ ಕಾಯ್ದೆ ಕುರಿತ ಜಾಗೃತಿ ರಥಕ್ಕೆ ಚಾಲನೆ

IMG-20241218-WA0032
Published on

ಚಾಮರಾಜನಗರ: ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು, ಕಾರ್ಡ್ ನೊಂದಣಿ, ನವೀಕರಣ, ನಿಜವಾದ ಕಟ್ಟಡ ಕಾರ್ಮಿಕರಲ್ಲದವರು ತಮ್ಮ ಕಾರ್ಡುಗಳನ್ನು ಹಿಂತಿರುಗಿಸುವುದರ ಬಗ್ಗೆ ಹಾಗೂ ಇಲಾಖೆಯ ವಿವಿಧ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಸಂಚಾರಿ ಜಾಗೃತಿ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮಂಗಳವಾರ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶರು ದೇಶದಲ್ಲಿ ಅತಿ ಹೆಚ್ಚು ದುಡಿಯುವ ವರ್ಗ ಕಂಡುಬರುತ್ತದೆ. ಅವರಲ್ಲಿ ಕಟ್ಟಡ ಕಾರ್ಮಿಕರು ಅತ್ಯಂತ ಶ್ರಮಜೀವಿಗಳು. ಇಂತಹ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಕಾರ್ಡ್ ಪಡೆದು ಕಾರ್ಮಿಕರಿಗೆ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು. ಕಾರ್ಮಿಕರಲ್ಲದವರು ಸುಳ್ಳು ದಾಖಲೆಗಳನ್ನು ನೀಡಿ ಕಾರ್ಡ್ ಹೊಂದಿದ್ದಲ್ಲಿ ತಕ್ಷಣ ಅಂತಹ ಕಾರ್ಡನ್ನು ಇಲಾಖೆಗೆ ಹಿಂತಿರುಗಿಸಬೇಕೆಂದು ಸೂಚಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ, ಯೋಜನಾ ನಿರ್ದೇಶಕರಾದ ಎಂ. ಮಹೇಶ್, ಕಾರ್ಮಿಕ ನಿರೀಕ್ಷಕರಾದ ಪ್ರಸಾದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ನಂಜಯ್ಯ, ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ಮೋಹನ್ ಜಗದೀಶ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net